ಇದು ಡಬಲ್ ಆಕ್ಟಿಂಗ್ ಸಿನಿಮಾ ಕತೆ: 20 ವರ್ಷ ಅಣ್ಣನ ಹೆಸರಲ್ಲಿ ಕುಟುಂಬ, ಕಾನೂನಿಗೆ ಯಾಮಾರಿಸಿದ ವ್ಯಕ್ತಿ !
ಚೆನ್ನೈ: ಇದೊಂದು ಖತರನಾಕ್ ಖದೀಮನೊಬ್ಬ ಅಣ್ಣನ ದಾಖಲೆಗಳನ್ನು ಬಳಸಿ, ಆತನಿಗೆ ಜೈಲು ಶಿಕ್ಷೆಯಾಗುವಂತೆ ಮಾಡಿದ್ದ ಕುತೂಹಲಕಾರಿ ಘಟನೆ.
20 ವರ್ಷದಿಂದ ಅಣ್ಣನ ದಾಖಲೆಗಳನ್ನು ಬಳಸಿ, ತನ್ನ ಕುಟುಂಬ ಹಾಗೂ ಪೊಲೀಸರಿಗೆ ಯಾಮಾರಿಸಿ, ಅಣ್ಣನಿಗೆ ಶಿಕ್ಷೆಯಾಗುವಂತೆ ಮಾಡಿದ್ದ ಭೂಪನನ್ನು ಚೆನ್ನೈ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
2002 ರಲ್ಲಿ ಲೂರ್ದ್ ಮೇರಿ ಎಂಬಾಕೆಯನ್ನು ಪಳನಿ ಎಂಬ ವ್ಯಕ್ತಿ ಮದುವೆಯಾಗಿದ್ದ. ಆಕೆಗೆ ಇಬ್ಬರು ಮಕ್ಕಳಿದ್ದರು. 2009 ರಲ್ಲಿ ಮಹಿಳೆ ಮತ್ತು ಮಕ್ಕಳ ಮೇಲೆ ಹಲ್ಲೆ ನಡೆಸಿ ಆತ ಪರಾರಿಯಾಗಿದ್ದ. ಆಗ ಮಹಿಳೆ ನೀಡಿದ ದೂರಿನ ಅನ್ವಯ ಪೊಲೀಸರು ಪಳನಿಯನ್ನು ಬಿಟ್ಟು ಸಹೋದರ ಪನ್ನೀರ್ ಸೆಲ್ವಂನನ್ನು ಬಂಧಿಸಿದ್ದರು.
ಆತನಿಗೆ ಮಹಿಳಾ ನ್ಯಾಯಾಲಯ 5 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರು.ದಂಡ ವಿಧಿಸಿತ್ತು. ತೀರ್ಪನ್ನು ಪ್ರಶ್ನಿಸಿ ಪನ್ನೀರ್ ಸೆಲ್ವಂ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಶಿಕ್ಷೆ ಪ್ರಮಾಣವನ್ನು 3 ವರ್ಷಕ್ಕೆ ಇಳಿಸಿತ್ತು. ಇದನ್ನು ಪ್ರಶ್ನಿಸಿ, ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಹೈಕೋರ್ಟ್ ಆದೇಶವನ್ನು ಎತ್ತಿಹಿಡಿಯಲಾಗಿತ್ತು.
ಈ ನಡುವೆ ನ್ಯಾಯಾಲಯ ಪನ್ನೀರ್ ಸೆಲ್ವಂನ ಈ ಡಬಲ್ ಆಕ್ಟಿಂಗ್ ಕತೆ ಬಗ್ಗೆ ಸ್ವಲ್ಪ ಕುತೂಹಲ ಮೂಡಿಸಿಕೊಂಡು ತನಿಖೆ ನಡೆಸುವಂತೆ ಸೂಚಿಸಿತ್ತು. ತನಿಖೆ ನಡೆಸಿದ ಚೆನ್ನೈ ಪೊಲೀಸರಿಗೆ ಕುತೂಹಲಕಾರಿ ಮಾಹಿತಿ ಸಿಕ್ಕಿದ್ದು, ಪೊಲೀಸರು ಶಾಕ್ ಆಗಿದ್ದಾರೆ.
ಏನಿದು ಪ್ರಕರಣ? : ಮಹಿಳೆ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ ಪಳನಿ ಎಂಬಾತನಾಗಿದ್ದು, ಶಿಕ್ಷೆ ಅನುಭವಿಸಿದ್ದು ಆತನ ಹೋಲಿಕೆಯೇ ಇದ್ದ ಆತನ ಸಹೋದರ ಪನ್ನೀರ್ ಸೆಲ್ವಂ. ಇದಕ್ಕೆ ಕಾರಣ ಪಳನಿ ತನ್ನ ಎಲ್ಲ ದಾಖಲೆಗಳನ್ನು ಪನ್ನೀರ್ ಸೆಲ್ವಂ ಹೆಸರಿನಲ್ಲಿ ಇಟ್ಟುಕೊಂಡಿದ್ದ.
ಪಳನಿ, 2002 ರಲ್ಲಿ ಲೂರ್ದ್ ಮೇರಿ ಎಂಬಾಕೆ ಜತೆಗೆ ಲಿವಿಂಗ್ ಟು ಗೆದರ್ ಜೀವನ ಮಾಡುತ್ತಿದ್ದ. ಆಗ ಆಕೆಗೂ ತಾನು ಪನ್ನೀರ್ ಸೆಲ್ವಂ ಎಂದೇ ಹೇಳಿಕೊಂಡಿದ್ದ. ಅನಂತರ, ಆಕೆ ಮತ್ತು ಮಕ್ಕಳ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದು. ಮಹಿಳೆ ದೂರು ನೀಡಿದಾಗ ಪೊಲೀಸರು ಪನ್ನೀರ್ ಸೆಲ್ವಂನನ್ನು ಬಂಧಿಸಿದ್ದರು.
ದಾಖಲೆಗಳೆಲ್ಲವೂ ಪನ್ನೀರ್ ಸೆಲ್ವಂದಾಗಿದ್ದರಿಂದ ಪೊಲೀಸರು ಪಳನಿ ಬಿಟ್ಟು ಆತನನ್ನೇ ಬಂದಿಸಿದ್ದರು. ಹೋಲಿಕೆಯಲ್ಲಿ ಇಬ್ಬರು ಒಂದೇ ರೀತಿಯಿದ್ದ ಕಾರಣ ಮಹಿಳೆ, ಈತನೇ ಆರೋಪಿ ಎಂದು ಹೇಳಿಕೆ ನೀಡಿದ್ದರು.
ನ್ಯಾಯಾಲಯದ ಮುಂದೆ ಪನ್ನೀರ್ ಸೆಲ್ವಂ ಮನವಿಯನ್ನು ಯಾರೂ ಕೇಳಲೇ ಇಲ್ಲ. ಹೀಗಾಗಿ ಆತನಿಗೆ ಐದು ವರ್ಷದ ಶಿಕ್ಷೆ ಆಗಿತ್ತು. ಆದರೆ, ಇದೀಗ ಪಳನಿಯನ್ನು ಪೊಲೀಸರು ಬಂಧಿಸುವ ಮೂಲಕ ಪನ್ನೀರ್ ಸೆಲ್ವಂ ಶಿಕ್ಷೆಗೆ ಮುಕ್ತಿ ಸಿಕ್ಕಿದೆ.
ಪನ್ನೀರ್ ಸೆಲ್ವಂ ಅಪರಾಧಿಯಾಗಿ ಜೈಲಿನಲ್ಲಿದ್ದರೂ ಆತನ ದಾಖಲೆಗಳನ್ನು ಬಳಸಿ, ಎಟಿಎಂ ನಿಂದ ಹಣ ಡ್ರಾ ಮಾಡಿದ್ದು, ಜತೆಗೆ ಅದೇ ಹೆಸರಿನಲ್ಲಿ ಸಿಮ್ ಕಾರ್ಡ್ ಖರೀದಿಸಿದ್ದ. ಗುರುತು ಸಿಗದಂತೆ ತಲೆ ಬೋಳಿಸಿಕೊಂಡು, MTC ಬಸ್ ನಲ್ಲಿ ಆತ ಓಡಾಡುತ್ತಿದ್ದ. ಆತನ ಜಾಡು ಹಿಡಿದ ಪೊಲೀಸರು ಮಂಡಿಪಾಕ್ಕಂನಲ್ಲಿ ಪತ್ತೆ ಮಾಡಿದ್ದು, ಬಂಧಿಸಿದ್ದಾರೆ.