ಬೆಂಗಳೂರು: 10 ತಿಂಗಳ ಮಗುವೊಂದು ಕೊನೆಯ ಹಂತದ ಹೃದಯ ಸಮಸ್ಯೆ ಅನುಭವಿಸುತ್ತಿದ್ದು, ಎರಡೂವರೆ ವರ್ಷದ ಮೆದುಳು ನಿಷ್ಕ್ರಿಯ ಮಗವೊಂದರ ಹೃದಯದಾನದಿಂದ ಬದುಕುಳಿದಿರುವ ‘ಹೃದಯ ಮಿಡಿಯುವ’ ಪ್ರಕರಣ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ಆಗಸ್ಟ್ 18 ರಂದು ಹೃದಯ ಕಸಿ ನಡೆದಿದ್ದು, ಆರು ವಾರಗಳ ನಿಗಾದ ನಂತರ ಮಗು ಇದೀಗ ಆರೋಗ್ಯಕರವಾಗಿದ್ದು, ಚಟುವಟಿಕೆಯಿಂದ ಕೂಡಿದೆ ಎಂದು ಹೇಳಲಾಗಿದೆ. ಈ ಕುರಿತು ಪುಟ್ಟ ಮಗುವಿನ ತಂದೆ ಗಿರಿನಗರದ ಉಪನ್ಯಾಸಕರು ಸಂತಸ ಹಂಚಿಕೊಂಡಿದ್ದಾರೆ. ತಮ್ಮ ಮಗುವಿಗೆ ಮರುಜನ್ಮ ನೀಡಿದ ನಾರಾಯಣ ಹೆಲ್ತ್ ಸಿಟಿಯ ವೈದ್ಯರು ಮತ್ತು ಹೃದಯದಾನಿಯ ಪೋಷಕರಿಗೆ ಧನ್ಯವಾದ ತಿಳಿಸಿದ್ದಾರೆ.
ಹತ್ತು ತಿಂಗಳ ಮಗು ಹೊಟ್ಟೆ ಉಬ್ಬರ ಮತ್ತು ಆಹಾರ ಸೇವನೆ ಮಾಡದಿರುವ ಸಮಸ್ಯೆಯ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿತ್ತು. ಈ ವೇಳೆ ಆತನ ಹೃದಯದಲ್ಲಿ ಸಮಸ್ಯೆ ಇರುವುದು ಕಂಡುಬಂತು. ಸಮಸ್ಯೆ ಕೊನೆಯ ಹಂತದಲ್ಲಿದ್ದು, ಹೃದಯ ಬದಲಾವಣೆ ಹೊರತುಪಡಿಸಿ, ಬೇರೆ ಯಾವ ಮಾರ್ಗವೂ ಕಾಣಿಸಲಿಲ್ಲ. ಅದೇ ಸಂದರ್ಭದಲ್ಲಿ ಮೆದುಳು ನಿಷ್ಕ್ರಿಯ ತೆಯಿಂದ ಮರಣವೊಂದಿದ್ದ ಎರಡೂವರೆ ವರ್ಷದ ಮಗುವಿನ ಪೋಷಕರು ಹೃದಯ ದಾನಕ್ಕೆ ಮುಂದಾದರು.
ಈ ನಿರ್ಧಾರ ಪೋಷಕರಿಗೆ ನೆಮ್ಮದಿ ತರಿಸಿದ್ದು, ವೈದ್ಯ ಡಾ. ಶಿವರಾಜ್ ನೇತೃತ್ವದ ತಂಡ ಯಶಸ್ವಿ ಹೃದಯ ಕಸಿ ನಡೆಸಿತು. ಆದರೆ, ಮಕ್ಕಳ ಹೃದಯ ಕಸಿ ಯಶಸ್ವಿಯಾಗುವುದು ಶೇ. 10 ರಷ್ಟು ಮಾತ್ರ. ಹೀಗಾಗಿ, ಅಪರೂಪದ ಆಪರೇಷನ್ ನಡೆಸಿದ ವೈದ್ಯರು ಆರು ವಾರಗಳ ಕಾಲ ನಿಗಾವಹಿಸಿದ್ದರು. ಇದೀಗ ಮಗು ಆರೋಗ್ಯವಾಗಿದ್ದು, ಹೃದಯ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ.
ತಮ್ಮ ಪುಟ್ಟ ಮಗುವನ್ನು ಕಂಡು ಪೋಷಕರು ಬಹಳ ಸಂತಸದಿಂದಿದ್ದು, ಸತತ ಗಂಟೆಗಳ ಆಪರೇಷನ್ ನಡೆಸಿ, ತಮ್ಮ ಮಗುವಿನ ನಗುವಿಗೆ ಕಾರಣರಾದ ವೈದ್ಯರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಅದರಲ್ಲೂ, ಎರಡೂವರೆ ವರ್ಷದ ತಮ್ಮ ಮಗುವಿನ ಹೃದಯ ದಾನಕ್ಕೆ ಮುಂದಾದ ಅಪರೂಪದ ಪೋಷಕರ ಬಗ್ಗೆ ಮೆಚ್ಚಿ ಕೊಂಡಾಡಿದ್ದಾರೆ.

