ಕುಡುಗೋಲಿನಿಂದ ಕೊಚ್ಚಿ ತುಂಬು ಗರ್ಭಿಣಿಯ ಭೀಕರ ಕೊಲೆ
ಬೆಳಗಾವಿ: ಗರ್ಭಿಣಿಯ ಭೀಕರ ಕೊಲೆಗೆ ಬೆಳಗಾವಿ ಜಿಲ್ಲೆಯ ಜನತೆ ಬೆಚ್ಚಿ ಬಿದ್ದಿದ್ದಾರೆ. ಇದು ಅಂತಿಂಥ ಕೊಲೆಯಲ್ಲ. ಅಥಣಿ ತಾಲೂಕಿನ ಚಿಕ್ಕೂಡ ಗ್ರಾಮದಲ್ಲಿ ಶುಕ್ರವಾರ 9 ತಿಂಗಳ ತುಂಬು ಗರ್ಭಿಣಿಯನ್ನು ಕುಡುಗೋಲಿನಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಲಾಗಿದೆ.
ಚಿಕ್ಕೂಡ ನಿವಾಸಿ ಸುವರ್ಣಾ ಮಾಂತಯ್ಯ ಮಠಪತಿ (36) ಕೊಲೆಯಾದವರು. ಶುಕ್ರವಾರ ಬೆಳಗ್ಗೆ ಅವರು ತಮ್ಮ ಮಕ್ಕಳನ್ನು ಶಾಲೆಗೆ ಬಿಟ್ಟು, ಮೇವು ತರಲು ಹೊಲಕ್ಕೆ ಹೋಗಿದ್ದರು. ಮರಳಿ ಬರುವಾಗ ಮಾರ್ಗಮಧ್ಯೆ ದುಷ್ಕರ್ಮಿಗಳು ಅವರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ಹೊಟ್ಟೆ, ಮುಖ, ತಲೆಗೆ ತೀವ್ರ ಪೆಟ್ಟಾಗಿದೆ.
ತುಂಬು ಗರ್ಭಿಣಿ ರಕ್ತಸಿಕ್ತವಾಗಿ ಬಿದ್ದಿದ್ದನ್ನು ಕಂಡು ಜನ ಪತಿ ಮಾಂತಯ್ಯ ಅವರಿಗೆ ತಿಳಿಸಿದ್ದಾರೆ. ವಾಹನದಲ್ಲಿ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಅಷ್ಟರಲ್ಲಿ ಅವರ ಪ್ರಾಣ ಪಕ್ಷಿಯೇ ಹಾರಿ ಹೋಗಿತ್ತು.
ಮಾಂತಯ್ಯ ಮತ್ತು ಸುವರ್ಣ ದಂಪತಿಗೆ ಈಗಾಗಲೇ ನಾಲ್ವರು ಹೆಣ್ಣುಮಕ್ಕಳಿದ್ದಾರೆ. ಈಗ 5ನೇ ಮಗುವಿನ ನಿರೀಕ್ಷೆಯಲ್ಲಿದ್ದರು. ವೈದ್ಯರು ಜನವರಿ 30ಕ್ಕೆ ಹೆರಿಗೆ ದಿನಾಂಕ ನೀಡಿದ್ದರು. ಆದರೆ, ಅಷ್ಟರಲ್ಲೇ ಕೊಲೆಯಾಗಿದೆ.
ಗರ್ಭಿಣಿ ಕೊಲೆ ಬಗ್ಗೆ ಯಾರ ಮೇಲೂ ಅನುಮಾನವಿಲ್ಲ ಎಂದು ಪತಿ ಹಾಗೂ ಸುವರ್ಣಾ ಅವರ ತಂದೆ- ತಾಯಿ ತಿಳಿಸಿದ್ದಾರೆ. ಅವರು ಯಾವ ರೀತಿಯ ದೂರು ನೀಡುತ್ತಾರೆ ನೋಡಿಕೊಂಡು ಕ್ರಮ ವಹಿಸಲಾಗುವುದು ಎಂದು ಅಥಣಿ ಪೊಲೀಸರು ಹೇಳಿದ್ದಾರೆ.