ತಂದೆಯನ್ನೇ ಕೊಂದು ಸುಟ್ಟು ಹಾಕಿದ ಸಹೋದರರು: ಸಣ್ಣ ವಯಸ್ಸಿನಿಂದ ತಂದೆ ಕೊಟ್ಟ ಕಾಟಕ್ಕೆ ಸೇಡು
ರುದ್ರಪ್ರಯಾಗ್ : ಸಣ್ಣ ವಯಸ್ಸಿನಿಂದಲೂ ತಂದೆ ಕೊಟ್ಟ ಕಾಟಕ್ಕೆ ಬೇಸತ್ತು ಆತನನ್ನು ಸಹೋದರಿಬ್ಬರು ಸೇರಿ ಕೊಲೆ ಮಾಡಿ ಸುಟ್ಟು ಹಾಕಿರುವ ಘಟನೆ ರುದ್ರಪ್ರಯಾಗ್ ನಲ್ಲಿ ನಡೆದಿದೆ.
55 ವರ್ಷದ ಬಲ್ಬೀರ್ ಸಿಂಗ್ ರಾಣಾ ಕೊಲೆಯಾದ ವ್ಯಕ್ತಿ, ಈತ ಸಣ್ಣ ವಯಸ್ಸಿನಿಂದಲೂ ತನ್ನ ಮಕ್ಕಳು ಮತ್ತು ಹೆಂಡತಿಗೆ ಕಾಟ ಕೊಡುತ್ತಲೇ ಇದ್ದ ಎನ್ನಲಾಗಿದೆ. ಈ ಕಾರಣದಿಂದ ಹೆಂಡತಿ ಇಬ್ಬರು ಹೆಣ್ಣುಮಕ್ಕಳ ಜತೆಗೆ ಆತನನ್ನು ತೊರೆದು ಹೋಗಿದ್ದರು. ಆದರೆ, ಅಮಿತ್ ರಾಣಾ(30) ಮತ್ತು ಮನೀಶ್ ರಾಣಾ(22) ತಂದೆಯ ಜತೆಯಲ್ಲಿ ವಾಸವಿದ್ದರು.
ಆದರೆ, ತಂದೆ ಮಕ್ಕಳನ್ನು ಹೊಡೆಯುವುದು, ನಿಂದಿಸುವುದನ್ನು ಬಿಟ್ಟಿರಲಿಲ್ಲ. ಹಿರಿಯ ಮಗ ಅಮಿತ್ ಮುಂಬಯಿನಲ್ಲಿ ಡೆಲಿವರಿ ಬಾಯ್ ಕೆಲಸ ಮಾಡುತ್ತಿದ್ದು, ಮನೀಶ್ ಡೆಹ್ರಾಡೂನ್ ನಲ್ಲಿ ಸಣ್ಣ ಕೆಲಸ ಮಾಡುತ್ತಿದ್ದ. ಆತನ ಸಂಬಳವನ್ನು ಕಿತ್ತುಕೊಂಡಿದ್ದ ತಂದೆ ವಾಪಸ್ ಕೊಡಲು ನಿರಾಕರಿಸಿದ್ದ.
ಈ ವಿಷಯವನ್ನು ಅಣ್ಣನಿಗೆ ತಿಳಿಸಿದ ಮನೀಶ್, ಅಣ್ಣ ಬರುತ್ತಿದ್ದಂತೆ ತಂದೆಯ ಮೇಲೆ ಜಗಳಕ್ಕೆ ಹೋಗಿದ್ದಾರೆ. ಜಗಳ ವಿಕೋಪಕ್ಕೆ ತಿರುಗಿ, ಆತನ ತಲೆಯ ಮೇಲೆ ಕಲ್ಲುಹಾಕಿ ಕೊಲೆ ಮಾಡಿದ್ದಾರೆ. ಮರುದಿನ ಶವವನ್ನು ನದಿಯ ದಂಡೆಯಲ್ಲಿ ಸುಟ್ಟುಹಾಕುತ್ತಿದ್ದಾಗ ಗ್ರಾಮಸ್ಥರು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಸಹೋದರರು ಯಾವುದೇ ಅಳುಕಿಲ್ಲದೆ ತಾವು ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ.
ತಕ್ಷಣವೇ ಗ್ರಾಮಸ್ಥರು ಪೊಲೀಸರಿಗೆ ವಿಷಯ ತಿಳಿಸಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು, ಆರೋಪಿಗಳನ್ನು ಬಂಧಿಸಿ, ಬಿಎನ್ ಎಸ್ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ವಿಚಾರಣೆ ಕೈಗೊಂಡಿದ್ದಾರೆ.