ಅಪರಾಧ ಸುದ್ದಿ

ಹೋಳಿ ಹಬ್ಬದ ದಿನವೇ ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್ ಮೇಲೆ ಬಾಟಲಿ ತೂರಾಟ!

Share It

ಬೆಳಗಾವಿ: ಮತ್ತೆ ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಹೋಳಿ ಹಬ್ಬದ ದಿನವೇ ಗೊಂದಲದ ವಾತಾವರಣ ಸೃಷ್ಟಿಯಾಗಿದೆ.

ಇಂದು ಕರ್ನಾಟಕ, ಮಹಾರಾಷ್ಟ್ರ ಬಸ್​​ಗಳಿಗೆ ಮಹಾರಾಷ್ಟ್ರದಲ್ಲಿ ಪುಂಡರು ಬಾಟಲಿ ಹೊಡೆದಿದ್ದಾರೆ. ಬಸ್​​ಗಳ ಗಾಜು ಪುಡಿ ಪುಡಿಯಾಗಿದ್ದರೆ, ಇತ್ತ ಘಟನೆ ಕುರಿತು ದೂರು ಕೂಡ ದಾಖಲಾಗಿದೆ. ಇತ್ತ ಬೆಳಗಾವಿಯಲ್ಲಿ ಕನ್ನಡವೇ ಆಡಳಿತ ಭಾಷೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಖಡಕ್ ಆಗಿ ಹೇಳಿದ್ದಾರೆ.

ಮತ್ತೆ ಬೆಳಗಾವಿ ಗಡಿಯಲ್ಲಿ ಮಹಾ ಪುಂಡರು ಕ್ಯಾತೆ!
ಇತ್ತೀಗಷ್ಟೇ ಮರಾಠಿಯಲ್ಲಿ ಮಾತನಾಡಲಿಲ್ಲ ಎಂದು ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕೆಎಸ್ಆರ್ಟಿಸಿ ಬಸ್ ಕಂಡಕ್ಟರ್ ಮೇಲೆ ಹಲ್ಲೆ ನಡೆದು ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಇದಾಗಿ ಒಂದು ವಾರದ ಕಾಲ ಉಭಯ ರಾಜ್ಯಗಳಿಗೆ ಬಸ್ ಸಂಚಾರ ಬಂದ್ ಆಗಿ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೆ ಗಡಿಯಲ್ಲಿ ಮಹಾರಾಷ್ಟ್ರ ಪುಂಡರು ದಾಂಧಲೆ ಮಾಡಿದ್ದಾರೆ. ಹೋಳಿ ಹಬ್ಬದ ದಿನವೇ ಮಹಾರಾಷ್ಟ್ರದಲ್ಲಿ ಕಿಡಿಗೇಡಿಗಳು ಪುಂಡಾಟ ಪ್ರದರ್ಶಿಸಿದ್ದಾರೆ.

ಇಂದು ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಇಂಚಲಕರಂಜಿಯಲ್ಲಿ ಕಿಡಿಗೇಡಿಗಳು ಪುಂಡಾಟ ಮೆರೆದಿದ್ದಾರೆ. ಪುಂಡರ ಗುಂಪೊಂದು ಏಕಾಏಕಿ ಕರ್ನಾಟಕದ ಬಸ್ ಮೇಲೆ ಬಾಟಲಿ ತೂರಾಟ ಮಾಡಿದ್ದಾರೆ. ನಿತ್ಯ ಇಚಲಕರಂಜಿ-ಚಿಕ್ಕೋಡಿ- ರಾಯಬಾಗ-ಜಮಖಂಡಿ ನಡುವೆ ಸಂಚರಿಸುತ್ತಿದ್ದ ಬಸ್ ಇದಾಗಿದ್ದು ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಬಸ್ ಮೇಲೆ ಬಾಟಲ್ ತೂರಿದ್ದು ಬೆಳಕಿಗೆ ಬಂದಿದೆ. ಇದರಿಂದ ರಾಯಬಾಗ ಡಿಪೋದ ಒಂದು ಕರ್ನಾಟಕ ಬಸ್​​ನ ಗಾಜು ಪುಡಿ ಪುಡಿ ಆಗಿದ್ದರೆ, ಮತ್ತೊಂದೆಡೆಗೆ ಮಹಾರಾಷ್ಟ್ರದ 6 ಬಸ್ ಗಳು ಸಹ ಜಖಂಗೊಂಡಿವೆ.

ಆರಂಭದಲ್ಲಿ ಕರ್ನಾಟಕ ಬಸ್​ಗೆ ಪುಂಡರು ಗಡಿ ವಿವಾದ ವಿಚಾರಕ್ಕೆ ಕಲ್ಲು ತೂರಾಟ ನಡೆಸಿದ್ದಾರೆ ಎಂಬ ಗಾಳಿ ಸುದ್ದಿ ರಭಸವಾಗಿ ಹರಡಿತ್ತು. ಆದರೆ ಹೋಳಿ ಹಬ್ಬದ ಪ್ರಯುಕ್ತ ಎರಡು ಗುಂಪುಗಳ ಗಲಾಟೆಯಿಂದ ಈ ಘಟನೆ ನಡೆದಿದೆ. ಈ ಬಗ್ಗೆ ಇಂಚಲಕರಂಜಿ ಶಿವಾಜಿ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಪ್ರಕರಣ ಸಂಬಂಧ 20 ಜನ ಕಿಡಿಗೇಡಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಬೆಳಗಾವಿ ಎಸ್ಪಿ ಡಾ.ಭೀಮಾಶಂಕರ್ ಗುಳೇದ್ ಮಾಹಿತಿ ನೀಡಿದ್ದಾರೆ.
ಇನ್ನು ಘಟನೆ ಕುರಿತು ಬಸ್ ಡ್ರೈವರ್ ಕೂಡ ಎಲ್ಲಾ ಮಾಹಿತಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಇನ್ನು ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತ ಮರಾಠಿಯಲ್ಲಿ ದಾಖಲೆಗಳನ್ನ ನೀಡುವಂತೆ ಕೆಲ ಕಿಡಿಗೇಡಿಗಳು ಬೆಳಗಾವಿಯಲ್ಲಿ ಕಿರಿಕ್ ಮಾಡ್ತಿದ್ದು, ಅವರಿಗೆ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಖಡಕ್ ಸಂದೇಶ ನೀಡಿದ್ದಾರೆ. ಬೆಳಗಾವಿಯಲ್ಲಿ ಕನ್ನಡವೇ ಸಾರ್ವಭೌಮ. ಇಲ್ಲಿ ಕನ್ನಡವೇ ಆಡಳಿತ ಭಾಷೆಯಿದೆ, ಇರುತ್ತೆ ಎಂದು ಬೆಳಗಾವಿ ಜಿಲ್ಲೆಯ ಗಡಿ ನಾಡಿನ ಕನ್ನಡಿಗರಿಗೆ ಅಭಯ ನೀಡಿದ್ದಾರೆ.

ಬೆಳಗಾವಿ, ಖಾನಾಪುರ ತಾಲೂಕುಗಳಲ್ಲಿ ಮರಾಠಿ ಭಾಷೆಯಲ್ಲಿ ದಾಖಲೆ ಕೊಡ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಆದರೆ ಈ ಆರೋಪವನ್ನ ಜಿಲ್ಲಾಡಳಿತ ಸ್ಪಷ್ಟವಾಗಿ ತಳ್ಳಿ ಹಾಕಿದೆ. 2 ವಾರಗಳ ಹಿಂದೆ ಕೇಂದ್ರದಿಂದ ಭಾಷಾ ಅಲ್ಪಸಂಖ್ಯಾತ ಆಯೋಗದ ಸಹಾಯಕ ಆಯುಕ್ತರು ಬೆಳಗಾವಿಗೆ ಭೇಟಿ ನೀಡಿದ್ದರು. ‌ಆಗ ಕೆಲ ಎಂಇಎಸ್ ಪುಂಡರು ‌ಮರಾಠಿ ಭಾಷೆಯಲ್ಲಿ ದಾಖಲೆ ಒದಗಿಸುವಂತೆ ಮನವಿ ಮಾಡಿದ್ದರು. ಇದು ಜಿಲ್ಲಾಡಳಿತದ ಗಮನಕ್ಕೂ ಬಂದಿತ್ತು. ಆದರೆ ಕಾನೂನಿನ ಸಲಹೆ ಪಡೆದು ಕ್ರಮ ವಹಿಸುವುದಾಗಿ ಜಿಲ್ಲಾಡಳಿತ ಆಯೋಗಕ್ಕೆ ತಿಳಿಸಿತ್ತು.‌ ಇದನ್ನೇ ಕೆಲವರು ಗೊಂದಲ ಸೃಷ್ಟಿಸುವ ಕೆಲಸವನ್ನ ಮಾಡಿದ್ದಾರೆ. ‌ಆದರೆ ಬೆಳಗಾವಿಯಲ್ಲಿ ಕನ್ನಡವೇ ಆಡಳಿತ ಭಾಷೆ ಇದೇ ಇರುತ್ತದೆ ಎಂದು ಗಟ್ಟಿಯಾಗಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದ್ದಾರೆ.


Share It

You cannot copy content of this page