ಉಪಯುಕ್ತ ಸುದ್ದಿ

ನಮ್ಮದು ದೇಶದ ನಂ.1 ಸಾರ್ವಜನಿಕ ಸಾರಿಗೆ ವ್ಯವಸ್ಥೆ: ವಾಟ್ಸಾಪ್ ಯೂನಿವರ್ಸಿಟಿಯಿಂದ ಜನರ ದಾರಿ ತಪ್ಪಿಸಬೇಡಿ

Share It

ಬೆಂಗಳೂರು: ನಮ್ಮದು ದೇಶದ ಅತ್ಯುನ್ನತ ಸಾರ್ವಜನಿಕ ಸಾರಿಗೆ ವ್ಯವಸ್ಥೆ. ಟಿಕೆಟ್ ದರವೂ ಇಡೀ ಬೇರೆ ರಾಜ್ಯಕ್ಕೆ ಹೋಲಿಸಿದರೆ ಬಹಳ ಕಡಿಮೆಯಿದೆ. ಹೀಗಾಗಿ, ಬಿಜೆಪಿ ನಾಯಕರು ವಾಟ್ಸಾಪ್ ಯೂನಿವರ್ಸಿಟಿ ಮೂಲಕ ಜನರ ಹಾದಿ ತಪ್ಪಿಸುವುದನ್ನು ನಿಲ್ಲಿಸಿ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಟಾಂಗ್ ಕೊಟ್ಟಿದ್ದಾರೆ.

ಟಿಕೆಟ್ ದರ ಹೆಚ್ಚಳ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ನಾಯಕರ ನಡೆಯನ್ನು ಸಾಮಾಜಿಕ ಜಾಲತಾಣದ ಮೂಲಕ ಕಿಡಿಕಾರಿರುವ ಅವರು, ಬಿಜೆಪಿ ನಾಯಕರು ಟಿಕೆಟ್ ದರ ಹೆಚ್ಚಳ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವುದು ಒಳ್ಳೆಯದು. ಇದರ ಮೂಲಕವಾದರೂ ರಾಜ್ಯದ ಜನತೆಗೆ ನಿಜ ತಿಳಿಸುವಂತಾಗಿದೆ ಎಂದು ಹೇಳಿದ್ದಾರೆ.

ಕೇಂದ್ರದಲ್ಲಿರುವ ಬಿಜೆಪಿ ಸರಕಾರ ಕಳೆದ 9 ವರ್ಷದಿಂದ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಮಾಡಿಲ್ಲ, ಬಿಜೆಪಿ ಅಧಿಕಾರದಲ್ಲಿ ಇದ್ದಾಗಲೂ, ಟಿಕೆಟ್ ದರ ಹೆಚ್ಚಳವಾಗಿದೆ. ಗ್ಯಾಸ್ ಸಬ್ಸಿಡಿ ನಿಲ್ಲಿಸಲಾಗಿದೆ. ಆಗೆಲ್ಲ ಜನರ ಕಷ್ಟ ಬಿಜೆಪಿ ನಾಯಕರಿಗೆ ಅರ್ಥವಾಗಲಿಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ.

ಬಿಜೆಪಿ ಅಧಿಕಾರದಲ್ಲಿದ್ದಾಗ ಸಾರಿಗೆ ನಿಗಮಗಳನ್ನು ಸರಿಯಾಗಿ ನಿರ್ವಹಣೆ ಮಾಡಿದ್ದರೆ, ಈಗ ಬೆಲೆ ಏರಿಕೆಯ ಅನಿವಾರ್ಯ ನಿರ್ಮಾಣವಾಗಿತ್ತಿರಲಿಲ್ಲ. ಬಸ್ ಖರೀದಿ, ವೇತನ ಪರಿಷ್ಕರಣೆ ಹಾಗೂ ನೇಮಕಾತಿಗಳನ್ನು ಸಮಯಕ್ಕೆ ಸರಿಯಾಗಿ ಮಾಡಿದ್ದರೆ ಸಮಸ್ಯೆಯಾಗುತ್ತಿರಲಿಲ್ಲ. ಅವರ ದುರಾಡಳಿತದ ಪರಿಣಾಮ 5900 ಕೋಟಿ ಸಾಲವನ್ನು ನಮ್ಮ ತಲೆಯ ಮೇಲೆ ಹೊರಿಸಿದ್ದಾರೆ ಎಂದು ಗುಡುಗಿದ್ದಾರೆ‌.

2023 ರಲ್ಲಿ ನಾವು ಅಧಿಕಾರಕ್ಕೆ ಬರುವುದಿಲ್ಲ ಎಂಬ ನಂಬಿಕೆ ಬಿಜೆಪಿಗಿತ್ತು. ಹೀಗಾಗಿಯೇ, ಅವರು ಈ ಎಲ್ಲಾ ದುರಾಡಳಿತ ನಡೆಸಿ, ನಮ್ಮ ತಲೆಯ ಮೇಲೆ ಕಟ್ಟಿದರು. ರಾಜ್ಯದ ಜನತೆಗೆ ನಾನು ಈ ಮೂಲಕ ನಮ್ಮದು ದೇಶದ ನಂ.1 ಸಾರಿಗೆ ವ್ಯವಸ್ಥೆ ಹಾಗೂ ಬೇರೆ ರಾಜ್ಯಗಳಿಗೆ ಹೋಲಿಸಿದರೆ, ಅತ್ಯಂತ ಕಡಿಮೆ ಬಸ್ ದರ ಇರುವ ರಾಜ್ಯ ಎಂಬುದನ್ನು ತಿಳಿಸಲು ಬಯಸುತ್ತೇನೆ ಎಂದಿದ್ದಾರೆ.


Share It

You cannot copy content of this page