ದುಬೈ, ಮಾ.4: ಚಾಂಪಿಯನ್ಸ್ ಕ್ರಿಕೆಟ್ ಟ್ರೋಫಿ-2025 ರ ಪಂದ್ಯಾವಳಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಭಾರತಕ್ಕೆ ಸವಾಲಿನ ಮೊತ್ತ ನೀಡಿದೆ.
49.3 ಓವರ್ ಗಳಲ್ಲಿ 264 ರನ್ ಗಳಿಗೆ ಆಲೌಟ್ ಆದ ಆಸ್ಟ್ರೇಲಿಯಾ ಟೀಂ ಇಂಡಿಯಾಕ್ಕೆ ಬೌಲಿಂಗ್ ಪಿಚ್ ನಲ್ಲಿ ತುಸು ಕಷ್ಟ ಎನಿಸುವ ಸವಾಲಿನ ಮೊತ್ತ ದಾಖಲಿಸಿದೆ.
ಆರಂಭದಲ್ಲಿ ಬೇಗನೆ ಮೊದಲ ವಿಕೆಟ್ ಕಳೆದುಕೊಂಡ ಆಸೀಸ್ ಗೆ ಓಪನರ್ ಟ್ರಾವಿಸ್ ಹೆಡ್ ಮತ್ತು ನಾಯಕ ಸ್ಟೀವನ್ ಸ್ಮಿತ್ ಚೇತರಿಕೆ ನೀಡಿ ಚುರುಕಿನ ಬ್ಯಾಟಿಂಗ್ ಪ್ರದರ್ಶಿಸಿದರು.
ಆದರೆ 39 ರನ್ ಗಳಿಸಿ ಟ್ರಾವಿಸ್ ಹೆಡ್ ಔಟಾದಾಗ ಭಾರತ ಎಡವಿತು. ಏಕೆಂದರೆ ಆಗ ಮಾರ್ಕಸ್ ಲಾಬುಶಾಗ್ನೆ ಜೊತೆಗೆ ನಾಯಕ ಸ್ಟೀವನ್ ಸ್ಮಿತ್ ಬಿರುಸಾಗಿ ಬ್ಯಾಟಿಂಗ್ ನಡೆಸಿದರು.
110 ರನ್ ಆಗಿದ್ದಾಗ 29 ರನ್ ಗಳಿಸಿದ್ದ ಲಾಬುಶಾಗ್ನೆ ಔಟಾದರು. ಆದರೂ ವಿಕೆಟ್ ಕೀಪರ್ ಜೋಶ್ ಇಂಗ್ಲೀಸ್ ಜೊತೆ ಮತ್ತೆ ಸ್ಟೀವನ್ ಸ್ಮಿತ್ ಚುರುಕಿನ ಬ್ಯಾಟಿಂಗ್ ನಡೆಸಿದರೂ 144 ರನ್ ಆಗಿದ್ದಾಗ ಇಂಗ್ಲೀಸ್ ವಿಕೆಟ್ ಪತನವಾಯಿತು.
ಆದರೂ ಆಗ ಅಲೆಕ್ಸ್ ಕ್ಯಾರೆ ಜೊತೆಗೆ ಸೇರಿ ನಾಯಕ ಸ್ಮಿತ್ ಅದೇ ಚುರುಕಿನ ಬ್ಯಾಟಿಂಗ್ ನಡೆಸಿದರು. ಆದರೆ ಸ್ಕೋರ್ 198 ರನ್ ಆಗಿದ್ದಾಗ ಸ್ಮಿತ್ 73 ರನ್ ಗಳಿಸಿ ಔಟಾಗಿ ಪೆವಿಲಿಯನ್ ಸೇರಿದರು. ಮತ್ತೆ ಗ್ಲೆನ್ ಮ್ಯಾಕ್ಸ್ ವೆಲ್ ಸಹ ಬೇಗನೆ ಔಟಾದಾಗ ಸ್ಕೋರ್ 205 ಆಗಿತ್ತು. ಆದರೂ ಬಾಲಂಗೋಚಿ ಬ್ಯಾಟ್ಸ್‌ಮನ್ ಬೆನ್ ದ್ವಾರ್ಶುಸ್ ಜೊತೆ ಬ್ಯಾಟಿಂಗ್ ನಡೆಸಿ ಅಲೆಕ್ಸ್ ಕ್ಯಾರೆ ಸ್ಕೋರ್ ಅನ್ನು 239 ರನ್ ಗೆ ಮುಟ್ಟಿಸಿದಾಗ 7 ನೇ ವಿಕೆಟ್ ಬೆನ್ ಮೂಲಕ ಪತನವಾಯಿತು.
ಇಷ್ಟಾದರೂ ವಿಕೆಟ್ ಮೇಲೆ ಕಚ್ಚಿ ನಿಂತಿದ್ದ ಅಲೆಕ್ಸ್ ಕ್ಯಾರೆ 61 ರನ್ ಗಳಿಸಿ ಔಟಾದರು. ಆಗ ಸ್ಕೋರ್ 47.1 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 249 ರನ್. ಮುಂದೆ ಅ್ಯಡಂ ಝಂಪಾ 7 ರನ್ ಮತ್ತು ನಾಥನ್ ಇಲಿಯಾಸ್ 10 ರನ್ ಗಳಿಸಿದರೂ ಆಸ್ಟ್ರೇಲಿಯಾ 49.3. ಓವರುಗಳಲ್ಲಿ 264 ರನ್ ಗಳಿಸಿ ಆಲೌಟ್ ಆಯಿತು.
ಭಾರತದ ಪರ ಬೌಲಿಂಗ್ ನಲ್ಲಿ ವೇಗದ ಬೌಲರ್ ಮೊಹಮ್ಮದ್ ಶಮಿ 3 ವಿಕೆಟ್ ಗಳಿಸಿದರೆ, ವರುಣ್ ಚಕ್ರವರ್ತಿ ಹಾಗೂ ರವೀಂದ್ರ ಜಡೇಜಾ ತಲಾ 2 ವಿಕೆಟ್ ಗಳಿಸಿದರು. ಹಾರ್ದಿಕ್ ಪಾಂಡ್ಯ ಮತ್ತು ಅಕ್ಸರ್ ಪಟೇಲ್ ತಲಾ 1 ವಿಕೆಟ್ ಗಳಿಸಿದರು.
ಇಷ್ಟಾದರೂ ಸಹ ದುಬೈ ಸ್ಟೇಡಿಯಂನಲ್ಲಿ ಸರಾಸರಿ ಸ್ಕೋರ್ ಕೇವಲ 229 ರನ್ ಆಗಿದೆ. ಇಷ್ಟಾದರೂ ಈ ಪಿಚ್ ನಲ್ಲಿ ಕೇವಲ 4 ತಂಡಗಳು 300 ಕ್ಕಿಂತ ಹೆಚ್ಚಿನ ರನ್ ಗಳಿಸಿವೆ. ಹಾಗಾಗಿ 265 ರನ್ ಟಾರ್ಗೆಟ್ ಭಾರತಕ್ಕೆ ಸವಾಲಿನ ಮೊತ್ತ ಎಂದು ಪರಿಗಣಿಸಲಾಗಿದೆ.