ಬೆಂಗಳೂರು: ಬಿಟಿಎಂ ಲೇಔಟ್ ಆಸ್ತಿ ಮಾಲೀಕರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ ಅವರ ಕಚೇರಿಯಿಂದ ಉಚಿತವಾಗಿ ಇ-ಖಾತಾ ಮಾಡಿಸಿಕೊಡುವ ಅಭಿಯಾನವನ್ನು ಆರಂಭಿಸಲಾಗಿದೆ.
ಇ-ಖಾತಾ ಪಡೆಯಲು ಸಾರ್ವಜನಿಕರು ಪರದಾಡುತ್ತಿರುವ ಹಿನ್ನೆಲೆಯಲ್ಲಿ ಸಚಿವ ರಾಮಲಿಂಗಾ ರೆಡ್ಡಿ ಅವರು, ತಮ್ಮ ಕಚೇರಿಯಲ್ಲಿಯೇ ಉಚಿತವಾಗಿ ಖಾತೆ ಮಾಡಿಸಿಕೊಡುವ ಅಭಿಯಾನ ಆರಂಭಿಸಿದ್ದಾರೆ. ಜು.14 ರಂದು ಆರಂಭವಾಗಿರುವ ಇ-ಖಾತಾ ಜು. 26 ರವರೆಗೆ ನಡೆಯಲಿದೆ.
ಸೋಮವಾರ ಬಿಬಿಎಂಪಿ ಕಚೇರಿಯಲ್ಲಿ ಇ- ಖಾತಾ ಅಭಿಯಾನಕ್ಕೆ ಸಚಿವ ರಾಮಲಿಂಗಾ ರೆಡ್ಡಿ ಅವರು ಚಾಲನೆ ನೀಡಿ, ನಗರದಲ್ಲಿ ಇ-ಖಾತಾ ಪಡೆಯಲು ಸಮಸ್ಯೆಗಳಾಗುತ್ತಿತ್ತು. ಈ ಹಿನ್ನೆಯಲ್ಲಿ ಅಭಿಯಾನ ಆರಂಭಿಸಲಾಗಿದೆ. ಈ ಅಭಿಯಾನದ ಸದುಪಯೋಗವನ್ನು ಕ್ಷೇತ್ರದ ಜನತೆ ಪಡೆದುಕೊಳ್ಳಬೇಕು. ಆ ಮೂಲಕ ಇ- ಖಾತಾ ಸಮಸ್ಯೆ ಪರಿಹರಿಸಿಕೊಳ್ಳಬೇಕು ಎಂದು ಅವರು ಕ್ಷೇತ್ರದ ಜನತೆಗೆ ಮನವಿ ಮಾಡಿಕೊಂಡಿದ್ದಾರೆ.
ಕೋರಮಂಗಲ 5 ನೇ ಬ್ಲಾಕ್ ನ ಬಿಬಿಎಂಪಿಯ ಶಾಸಕರ ಕಚೇರಿಯಲ್ಲಿ ಪ್ರತಿದಿನ ಬೆಳಗ್ಗೆ 9.30 ರಿಂದ ಸಂಜೆ 4.30 ರವರೆಗೆ ಇ- ಖಾತಾ ಮಾಡಿಕೊಡಲಾಗುತ್ತದೆ. ಅಗತ್ಯ ದಾಖಲೆಗಳಾದ ಸೇಲ್ ಡೀಡ್ ಪ್ರತಿ, ಖಾತಾ ಪ್ರತಿ, ಇತ್ತೀಚಿನ ವಿದ್ಯುತ್ ಬಿಲ್, ಇತ್ತೀಚಿನ ಬಿಬಿಎಂಪಿ ಟ್ಯಾಕ್ಸ್ ರಸೀದಿ, ಪಾಸ್ ಪೋರ್ಟ್ ಅಳತೆಯೊಂದು ಭಾವಚಿತ್ರ ಹಾಗೂ GPS ಲೋಕೇಷನ್ ಸಹಿತ ಕಟ್ಟಡದ ಭಾವಚಿತ್ರವನ್ನು ಜತೆಯಲ್ಲಿ ತರಬೇಕು.

