ಬೆಂಗಳೂರು: ಕಾಂಗ್ರೆಸ್ನಲ್ಲಿ ಯಾರೂ ಅಧಿಕಾರ ಹಂಚಿಕೆ ಬಗ್ಗೆ ಮಾತನಾಡಬಾರದು, ಅದು ಪಕ್ಷಕ್ಕೆ ಡ್ಯಾಮೇಜ್ ಆಗುತ್ತೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸೂಚನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಯಾರಿಗೂ ಪವರ್ ಶೇರಿಂಗ್ ಬಗ್ಗೆ ಮಾತನಾಡುವುದಕ್ಕೆ ಹಕ್ಕಿಲ್ಲ. ಕುಣಿಗಲ್ ಶಾಸಕ ರಂಗನಾಥ್ ಸೇರಿದಂತೆ ಯಾರು ಸಹ ಮಾತನಾಡಬಾರದು. ಅವರಿಗೆ ನೋಟಿಸ್ ಕೊಡಲು ಹೇಳಿದ್ದೇನೆ ಎಂದರು.
ಪವರ್ ಶೇರಿಂಗ್ ಬಗ್ಗೆ ಎಲ್ಲಿ ಚರ್ಚೆ ಇದೆ? ಸಿಎಂ ಸಿದ್ದರಾಮಯ್ಯ ಅವರು ಈಗಾಗಲೇ ಹೇಳಿದ್ದಾರೆ, ಯಾರು ಚರ್ಚೆ ಮಾಡಬಾರದು. ಇದರ ಬಗ್ಗೆ ಮಾತನಾಡುವವರು ಪಕ್ಷಕ್ಕೆ ಡ್ಯಾಮೇಜ್ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಪರವಾಗಿ ಮಾತಾಡಿದರೂ, ನನ್ನ ಪರವಾಗಿ ಮಾತಾಡಿದರೂ ಅದು ಡ್ಯಾಮೇಜ್ ಆಗುತ್ತೆ. ಇದರ ಬಗ್ಗೆ ಚರ್ಚೆ ಮಾಡಿದರೆ ಪಕ್ಷ ವಿರೋಧಿ ಚಟುವಟಿಕೆ ಮಾಡಿದಂತೆ ಎಂದು ಖಡಕ್ ಆಗಿ ಹೇಳಿದ್ದಾರೆ.
ಹೈಕಮಾಂಡ್ ಮಾತೇ ಅಂತಿಮ. ಹೈಕಮಾಂಡ್ ಹೇಳಿದಂತೆ ನಾವು ನಡೆದುಕೊಳ್ಳುತ್ತೇವೆ. ನಮಗೆ ಪಕ್ಷ ಮುಖ್ಯ, ವ್ಯಕ್ತಿಯಲ್ಲ. ಪಕ್ಷ ಹೇಳಿದಂತೆ ಕೇಳಿಕೊಂಡು ಹೋಗುತ್ತೇವೆ ಅಂತ ಹೇಳಿದ್ದಾರೆ. ನೀವು ಹೇಳಿದ್ದು ನಮ್ಮ ಬಾಯಲ್ಲಿ ಹೇಳಿಸುವುದಕ್ಕೆ ಹೋಗಬೇಡಿ, ನಾನು ಮೂರ್ಖನಲ್ಲ ಎಂದಿದ್ದಾರೆ.
ಅಧಿಕಾರ ಹಂಚಿಕೆ ಬಗ್ಗೆ ಮಾತನಾಡಬಾರದು: ಡಿಸಿಎಂ
