ರಾಜಕೀಯ ಸುದ್ದಿ

ನಿಮ್ಮ ಟ್ಟೀಟ್ ಚಾಳಿಗೆ ಕೊನೆಯೇ ಇಲ್ಲವೇ: ನಿಖರ ಜ್ಞಾನವಿಲ್ಲದೆ ಮಾತನಾಡುವುದೇ ನಿಮ್ಮ ಛಾಳಿ ಎಂದು ಬಿಜೆಪಿ ನಾಯಕರಿಗೆ ತಿವಿದ ಸಚಿವ ರಾಮಲಿಂಗಾ ರೆಡ್ಡಿ ಪ್ರಶ್ನೆ

Share It

ಬೆಂಗಳೂರು: ನಿಮ್ಮ ಟ್ಟೀಟ್ ಚಾಳಿಗೆ ಕೊನೆಯೇ ಇಲ್ಲವೇ? ನಿಖರ ಮಾಹಿತಿ ಇಲ್ಲದೆ ಟ್ವೀಟ್ ಮಾಡುವ ಬಿಜೆಪಿಯವರಿಗೆ ಸಾಮಾನ್ಯ ಪರಿಜ್ಞಾನ ಇಲ್ಲವೆಂಬುದು ಸಾಬೀತಾಗುತ್ತದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಕಿಡಿಕಾರಿದ್ದಾರೆ.

ಬಿಜೆಪಿ ಆಡಳಿತದಲ್ಲಿ ಸಾರಿಗೆ ಸಂಸ್ಥೆಗಳಲ್ಲಿನ  ಕರ್ಮಕಾಂಡವನ್ನು  ಅಂಕಿ ಅಂಶ ಸಮೇತ ಬಟಾಬಯಲು‌ ಮಾಡಿದ ಮೇಲೂ, ಮಾನ ಮಾರ್ಯಾದೆ ಇಲ್ಲದೆ, ಸುಳ್ಳು ಟ್ವೀಟ್ ಮಾಡುತ್ತಿದೆ. ಆಮೂಲಕ ಜಟ್ಟಿ ಜಾರಿ ಬಿದ್ದರೂ ಮೀಸೆ ಮಣ್ಣಾಗಿಲ್ಲವೆಂಬಂತೆ ವರ್ತಿಸುವುದು ನಾಚಿಕೆಗೇಡಿನ‌ ಸಂಗತಿ ಎಂದಿದ್ದಾರೆ.

ಬಿಜೆಪಿ ಅವಧಿಯಲ್ಲಿ ಸಾರಿಗೆ ನಿಗಮಗಳಲ್ಲಿ 64% ಬಸ್ಸುಗಳು ವಯೋಮಾನ ಪೂರೈಸಿದ್ದರೂ ಕಾರ್ಯಾಚರಣೆ‌ ಮಾಡುತ್ತಿತ್ತು. ಇದಕ್ಕೆ ಅಂಕಿ ಅಂಶ ಬೇಕೆ? ತಮ್ಮ ಅವಧಿಯಲ್ಲಿ ಒಂದೇ ಒಂದು ಹೊಸ ಬಸ್ ಸೇರ್ಪಡೆ ಮಾಡಲಾಗದೆ, ಡಕೋಟಾ ಬಸ್ಸುಗಳನ್ನು ಕಾರ್ಯಾಚರಣೆ‌ ಮಾಡುವ ಪರಿಸ್ಥಿತಿಗೆ ನಿಗಮಗಳು ತಲುಪಿದ್ದು, ನಿಮಗೆ ಸಾಧನೆಯಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ವಯೋಮಾನ ಮೀರಿದ ಬಸ್ಸುಗಳನ್ನು ಡಕೋಟಾ ಬಸ್ಸುಗಳು ಅಂತ ನೀವು ಪದೇ ಪದೇ ವಿಡಿಯೋ ಹರಿಬಿಡುತ್ತೀರಲ್ಲಾ ಅವೆಲ್ಲವೂ ನಿಮ್ಮ ಅಸಮರ್ಥ ಸರ್ಕಾರದ ವೈಫಲ್ಯಗಳ ಹೆಗ್ಗುರುತಲ್ಲವೇ? ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ವಯೋಮಾನ‌ ಮೀರಿದ ಬಸ್ಸುಗಳ ಕಾರ್ಯಾಚರಣೆ ಸುಗಮಗೊಳಿಸಲು ಬಸ್ಸುಗಳ ಪುನಶ್ಚೇತನ Refurbishing ಉಪಕ್ರಮವನ್ನು‌ ಜಾರಿಗೊಳಿಸಿದ್ದು, ನಮ್ಮ ಬದ್ಧತೆಗೆ ಸಾಕ್ಷಿಯಲ್ಲವೇ? ಎಂದಿದ್ದಾರೆ.

ಮುಖ್ಯಮಂತ್ರಿಗಳು ಬಜೆಟ್ ನಲ್ಲಿ 2000 ಹೊಸ ಬಸ್ಸುಗಳ ಸೇರ್ಪಡೆ ಮಾಡುವುದಾಗಿ ಘೋಷಿಸಿದ್ದು, ಅದರ ಭಾಗವಾಗಿ 660 ಹೊಸ ಬಸ್ಸುಗಳ ಸೇರ್ಪಡೆಯಾಗಿದೆ. ಇಷ್ಟು ಅರ್ಥವಾಗದಿರುವುದು ನಿಮ್ಮ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿ ಯಾಗಿದೆ. ಭಾರತ ಸರ್ಕಾರದ ಅಧಿಸೂಚನೆ ಸಂಖ್ಯೆ: ಜಿ.ಎಸ್.ಆರ್.29(ಇ), ದಿನಾಂಕ: 16.012023 ರಂತೆ ನಿಗಮದ ಬಸ್ಸುಗಳು 15 ವರ್ಷಗಳ ವಯೋಮಾನವನ್ನು ಪೂರೈಸಿದ ತರುವಾಯ ಸ್ವಯಂ ಆಗಿ ಬಸ್ಸು ನೋಂದಣಿ ರದ್ದತಿಯಾಗುವುದರಿಂದ ಬಸ್ಸುಗಳ ಸೇರ್ಪಡೆ ಎನ್ನುವುದು ನಿರಂತರ ಪ್ರಕ್ರಿಯೆಯಾಗಿದೆಯೆಂಬುದು ತಿಳಿಯದಷ್ಟು ದಡ್ಡತನವೇ? ಎಂದಿದ್ದಾರೆ.

ತಮ್ಮ ಆಡಳಿತ ಅವಧಿಯಲ್ಲಿ ಸಾರಿಗೆಯಲ್ಲಿ ಶೂನ್ಯ ನೇಮಕಾತಿಯಾಗಿದ್ದವು. ನಮ್ಮ ಅವಧಿಯಲ್ಲಿ 10000 ನೇಮಕಾತಿಯಾಗಿವೆ. ಇದು ತಮ್ಮ  ಹೋರಾಟದ ಫಲವೇ? ನಮ್ಮ‌ ಸರ್ಕಾರದ ಎರಡುವರೆ ವರ್ಷದ ಆಡಳಿತದಲ್ಲಿಯೇ 7800 ಬಸ್ಸುಗಳ ಸೇರ್ಪಡೆಯಾಗಿದೆ. ಇದು ತಮ್ಮ ಹೋರಾಟದ ಫಲವಾಗಲು ಹೇಗೆ ಸಾಧ್ಯ?  ಬೇರೆಯವರ ಕೆಲಸಗಳಿಗೆ ಹೆಸರು, ಬಣ್ಣ, ಲೋಗೋ ಬದಲಿಸಿ ತಮ್ಮದೆಂದು ಬಿಂಬಿಸಿಕೊಂಡು ಕ್ರೆಡಿಟ್ ತೆಗೆದುಕೊಳ್ಳುವುದು ಚಟ ಇದೆ ಎಂದು ಜಗತ್ತಿಗೆ ಗೊತ್ತಿದೆ ಎಂದಿದ್ದಾರೆ.


Share It

You cannot copy content of this page