ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ 27 ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ನೂತನ ಬಸ್ಸುಗಳ ಲೋಕಾರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಅಪಘಾತ ರಹಿತ ಸೇವೆಗಾಗಿ 43 ಚಾಲಕರಿಗೆ “ಸುರಕ್ಷಾ ಚಾಲಕ” ಬೆಳ್ಳಿ ಪದಕ ಪ್ರದಾನ ಮಾಡಲಾಯಿತು. ಸಂಸ್ಥೆಯ ನೂತನ ಯೋಜನೆಗಳಾದ ಸಾರಿಗೆ ಸಂಜೀವಿನಿ ಯೋಜನೆಯಡಿ ಕಾರವಾರ/ಬೆಳಗಾವಿ/ಗದಗ ಸರ್ಕಾರಿ ವಿಜ್ಞಾನ ಸಂಸ್ಥೆಗಳೊಂದಿಗೆ ನೌಕರರಿಗೆ ಹಾಗೂ ಅವಲಂಬಿತರಿಗೆ ನಗದು ರಹಿತ ಚಿಕಿತ್ಸೆ ನೀಡುವ ಯೋಜನೆಗೆ ಚಾಲನೆ ನೀಡಲಾಯಿತು.
ವಾಯವ್ಯ ಸಾರಿಗೆ ಸಂಪದ ಡಿಜಿಟಲ್ ತ್ರೈಮಾಸಿಕ ಪತ್ರಿಕೆಯ ಬಿಡುಗಡೆ. ಮೃತಪಟ್ಟ ಸಂಸ್ಥೆಯ ನೌಕರರ ಅವಲಂಬಿತರಿಗೆ ನೌಕರರ ಕುಟುಂಬ ಕಲ್ಯಾಣ ನಿಧಿ ಯೋಜನೆಯ ರೂ 5 ಲಕ್ಷ ಮೊತ್ತದ ಚೆಕ್ ವಿತರಣೆ ಮತ್ತು ಸಂಸ್ಥೆಯಲ್ಲಿ ಮೃತಪಟ್ಟ ನೌಕರರ ಅವಲಂಬಿತರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ರೂ 50 ಲಕ್ಷದ ಮೊತ್ತದ ಅಪಘಾತ ವಿಮಾ ಯೋಜನೆಯ ಚೆಕ್ ವಿತರಣೆ ಮಾಡಲಾಯಿತು.
ಕೆನರಾ ಬ್ಯಾಂಕ್ ರವರೊಂದಿಗೆ ರೂ.1 ಕೋಟಿ ಮೊತ್ತದ ಅಪಘಾತ ವಿಮಾ ಯೋಜನೆಯ ಒಡಂಬಡಿಕೆ ಮಾಡಿಕೊಳ್ಳಲಾಯಿತು. ನೌಕರರು ಭವಿಷ್ಯ ನಿಧಿ ಮುಂಗಡಕ್ಕೆ ಅರ್ಜಿ ಸಲ್ಲಿಸುವ ಮತ್ತು ವಾಣಿಜ್ಯ ಮಳಿಗೆಗಳ ಬಾಡಿಗೆ ಮೊತ್ತವನ್ನು UPI ಮೂಲಕ ಪಾವತಿಸುವ ತಂತ್ರಾಂಶಗಳ ಚಾಲನೆ ನೀಡಲಾಯಿತು.
ನೂತನ ಕಿರಿಯ ಸಹಾಯಕ ಮತ್ತು ತಾಂತ್ರಿಕ ಸಿಬ್ಬಂದಿಗಳಿಗೆ ನೇಮಕಾತಿ ಆದೇಶ ಪತ್ರಗಳ ವಿತರಣೆ, 2024-25 ನೇ ಸಾಲಿನ ಅಂತರ ವಿಭಾಗೀಯ ಕ್ರೀಡಾ ಮತ್ತು ಕಲಾ ಚಟುವಟಿಕೆಗಳಲ್ಲಿ ವಿಜೇತರಿಗೆ ಪಾರಿತೋಷಕ ವಿತರಣೆ ಮಾಡಲಾಯಿತು. 2023-24 ನೇ ಸಾಲಿನಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಗೆ ಪುರಸ್ಕಾರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಎಸ್.ಲಾಡ್ ಮತ್ತು ಸಂಸ್ಥೆ ಅಧ್ಯಕ್ಷ ಭರಮಗೌಡ (ರಾಜು) ಅಲಗೌಡ ಕಾಗೆ, ಹುಬ್ಬಳ್ಳಿ-ಧಾರವಾಡ (ಪೂರ್ವ) ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಕೊಳಚೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಬ್ಬಯ್ಯ ಪ್ರಸಾದ್, ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕಿರ್ ಸನದಿ, ಸಂಸ್ಥೆ ಉಪಾಧ್ಯಕ್ಷ ಪೀರಸಾಬ್ ಅ. ಕೌತಾಳ, ಮಾಜಿ ಸಂಸದ ಐ.ಜಿ.ಸನದಿ, ಮಾಜಿ ಶಾಸಕ ಹಾಗೂ ಸಂಸ್ಥೆ ಮಾಜಿ ಅಧ್ಯಕ್ಷ ವಿ.ಎಸ್.ಪಾಟೀಲ್, ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ, ಭಾ.ಆ.ಸೇ, ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾII ಗೋಪಾಲ ಎಂ.ಬ್ಯಾಕೋಡ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಪ್ರಿಯಾಂಗಾ.ಎಂ ಉಪಸ್ಥಿತರಿದ್ದರು.