ಮೂಡಾ ಪ್ರಕರಣ: ಲೋಕಾಯುಕ್ತಕ್ಕೆ ಇಡಿ ವರದಿ: ಇದು ರಾಜಕೀಯ ಪ್ರೇರಿತ ಎಂದ ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಇಡಿ ತನಿಖೆ ನಡೆಸಿ ಮುಗಿಸಿದ ನಂತರ ಲೋಕಾಯುಕ್ತಕ್ಕೆ ನೀಡಬೇಕಿತ್ತು. ಆದರೆ, ಈಗಲೇ ನೊಟೀಸ್ ಕೊಟ್ಟಿರುವುದು ರಾಜಕೀಯ ಪ್ರೇರಿತ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸಿಎಂ ಪತ್ನಿ ಪಾರ್ವತಿ ಅವರಿಗೆ ಮಂಜೂರಾಗಿರುವ 14 ನಿವೇಶನಗಳನ್ನು ಅವರ ಹೆಸರಿಗೆ ಜಮೀನು ರಿಜಿಸ್ಟರ್ ಆಗುವ ಮೊದಲೇ ಹಂಚಿಕೆ ಮಾಡಲಾಗಿದೆ ಎಂಬ ಅಂಶವನ್ನು ಇಡಿ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ಹೇಳಲಾಗುತ್ತದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಇಡಿ ತನಿಖೆ ನಡೆಸಿರುವುದಕ್ಕೆ ನಮ್ಮದೇನು ತಕರಾರಿಲ್ಲ. ಆದರೆ, ಇಡಿ ತನಿಖೆ ಹೇಗೆ ನಡೆಯುತ್ತದೆ ಎಂಬುದು ಇಡೀ ದೇಶಕ್ಕೆ ಗೊತ್ತಿದೆ. ಇದೀಗ ತನಿಖೆ ಪೂರ್ಣಗೊಳಿಸಿ ನಂತರ ಲೋಕಾಯುಕ್ತಕ್ಕೆ ವರದಿ ಸಲ್ಲಿಕೆ ಮಾಡಬೇಕಿತ್ತು. ಆದರೆ, ಈಗಲೇ ವರದಿ ಸಲ್ಲಿಕೆ ಮಾಡಿರುವುದು ಅವರ ಉದ್ದೇಶವೇನು ಎಂಬುದನ್ನು ಸಾಭೀತು ಪಡಿಸುತ್ತದೆ ಎಂದಿದ್ದಾರೆ.
ಹೈಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ನಡೆಯುವ ಒಂದು ದಿನ ಮೊದಲು ಇಡಿ ತನಿಖೆಯ ಅಂಶಗಳು ಮಾಧ್ಯಮಗಳಲ್ಲಿ ವರದಿಯಾಗಿರುವುದು ಹಾಗೂ ಲೋಕಾಯುಕ್ತಕ್ಕೆ ಪತ್ರ ಬರೆದಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಆರೋಪಿಸಿದ್ದಾರೆ.
ಡಿಸೆಂಬರ್ 24 ರೊಳಗೆ ತನಿಖಾ ವರದಿ ನೀಡುವಂತೆ ನ್ಯಾಯಾಲಯ ಲೋಕಾಯುಕ್ತಕ್ಕೆ ಸೂಚನೆ ನೀಡಿದೆ. ಲೋಕಾಯುಕ್ತಕ್ಕೆ ಇಡಿ ತನಿಖೆ ನಡೆಸಿ ವರದಿ ನೀಡುವ ಅವಕಾಶವಿತ್ತು. ಆದರೆ, ಪತ್ರ ಬರೆದಿರುವುದು ರಾಜಕೀಯ ಪ್ರೇರಿತ ಎಂದು ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ.


