ಬೆಂಗಳೂರು: ವಿಪಕ್ಷ ನಾಯಕ ಆರ್. ಅಶೋಕ್ ವಿರುದ್ಧ ಕಾಂಗ್ರೆಸ್ ಸಚಿವರು ನೂರಾರು ಕೋಟಿ ಭೂಹಗರಣ ಮಾಡಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ, ಗೃಹ ಸಚಿವ ಡಾ. ಜಿ ಪರಮೇಶ್ವರ್ ಹಾಗೂ ಕಾನೂನು ಸಚಿವ ಸಚಿವ ಎಚ್ ಕೆ ಪಾಟೀಲ್ ಅವರು ದಾಖಲೆ ಬಿಡುಗಡೆ ಮಾಡಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ದಾಖಲೆ ಬಿಡುಗಡೆ ಮಾಡಿದ ಸಚಿವರು, ಆರ್. ಅಶೋಕ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ಪತ್ನಿಗೆ ಪರಿಹಾರವಾಗಿ ಬಂದಿದ್ದ 14 ನಿವೇಶನಗಳನ್ನು ವಾಪಸ್ ನೀಡಲಾಗಿದೆ. ಈ ಬಗ್ಗೆ ಆರ್. ಅಶೋಕ್ ಬೇರೆ ಅರ್ಥ ಕಲ್ಪಿಸಿ, ತಪ್ಪು ಮಾಡಿರುವ ಕಾರಣ ವಾಪಸ್ ನೀಡಿದ್ದೀರಿ ಎಂದು ಆರೋಪ ಮಾಡಿದ್ದಾರೆ. ಆರ್ ಅಶೋಕ್ ಅವರು ಲೊಟ್ಟೆ ಗೊಲ್ಲಹಳ್ಳಿಯಲ್ಲಿ ನೂರಾರು ಕೋಟಿ ಭೂ ಹಗರಣ ಮಾಡಿದ್ದು ನೆನಪಿಲ್ಲವೇ ಎಂದು ಗೃಹ ಸಚಿವ ಪರಮೇಶ್ವರ್ ಪ್ರಶ್ನಿಸಿದರು.
ಲೊಟ್ಟೆಗೊಲ್ಲಹಳ್ಳಿಯಲ್ಲಿ 32 ಗುಂಟೆ ಭೂಮಿಗೆ ಬಿಡಿಎ ನೋಟಿಫಿಕೇಷನ್ ಮಾಡಿದ್ದು, 1978ರಲ್ಲಿ ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ, 2003 ಮತ್ತು 2007ರಲ್ಲಿ ಬಿಡಿಎ ವಶದಲ್ಲಿದ್ದ ಜಮೀನನ್ನು ಅಶೋಕ್ ಅವರು ಹಿಂದಿನ ಮಾಲೀಕರ ಕುಟುಂಬದ ಸದಸ್ಯರಿಂದ ಸಂಪೂರ್ಣ ಖರೀದಿಸಿದ್ದರು ಎಂದು ಡಾ.ಪರಮೇಶ್ವರ ಹೇಳಿದರು. 2009ರಲ್ಲಿ ರಾಮಸ್ವಾಮಿ ಎಂಬುವವರ ಅರ್ಜಿಯ ಆಧಾರದ ಮೇಲೆ ಅಂದಿನ ಸಿಎಂ ಬಿಎಸ್ ಯಡಿಯೂರಪ್ಪ ಡಿನೋಟಿಫೈ ಮಾಡಿದ್ದರು ಎಂದು ತಿಳಿಸಿದ್ದಾರೆ.
ಡಿನೋಟಿಫಿಕೇಷನ್ ನಂತರ ನಿವೃತ್ತ ವಿಂಗ್ ಕಮಾಂಡರ್ ಜಿ.ವಿ ಅತ್ರಿ ಎಂಬುವವರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ನಂತರ ಇದು ನ್ಯಾಯಾಲಯದ ಮೆಟ್ಟಿಲೇರುತ್ತಾರೆ. ನಂತರ ಆರ್. ಅಶೋಕ್ ಅವರು ಈ ಜಮೀನು ಹಿಂತಿರುಗಿಸಲು ತೀರ್ಮಾನಿಸುತ್ತಾರೆ. 27-08-2011ರಂದು ರಿಜಿಸ್ಟರ್ ಗಿಫ್ಟ್ ಮೂಲಕ ಬಿಡಿಎಗೆ ನೀಡುತ್ತಾರೆ. ಓನರ್‌ಶಿಪ್ ಇಲ್ಲದೇ ಅಶೋಕ್ ಗಿಫ್ಟ್ ಬಿಡಿಎಗೆ ನೀಡಿದ್ದಾರೆ ಎಂದು ಹಳೆಯ ಪ್ರಕರಣವೊಂದನ್ನ ಬಯಲು ಮಾಡಿದ್ದಾರ. ಆ ನಂತರ ಅತ್ರಿಯವರು ಹೈಕೋರ್ಟ್ ಅರ್ಜಿ ಹಾಕಿದ್ದಾರೆ. ಕ್ರಿಮಿನಲ್ ಕೇಸ್ ಹಾಕುವ ಅವಶ್ಯಕತೆಯಿಲ್ಲ ಎಂದು ಹೈಕೋರ್ಟ್‌ನಿಂದ ತೀರ್ಪು ಬರುತ್ತೆ. ವಾಪಸ್ ಕೊಟ್ಟಿಬಿಟ್ಟರಲ್ಲ ಕೇಸ್ ಬೇಕಾಗಿಲ್ಲ ಅಂತಾ ಜಡ್ಜ್ ಮೆಂಟ್ ಬರುತ್ತೆ. ಈಗ ಸಿಎಂ ಪತ್ನಿ ಸೈಟು ವಾಪಸ್ ಮಾಡಿದಾಗ ಮಾತನಾಡುವವರು ಹಿಂದೆ ಮಾಡಿದ್ದೇನು. ಇದು ಎಷ್ಟರಮಟ್ಟಿಗೆ ನ್ಯಾಯ ಕಬಳಿಸಿರೋದು, ಕಳ್ಳತನ ಮಾಡಿರೋದು ಅಂತಾ ಹೇಳಿದ್ರಿ, ನಾವು ನಿಮಗೆ ಅವರದ್ದೇ ಭಾಷೆಯಲ್ಲಿ ಹೇಳ್ಬೇಕಾಗುತ್ತೆ ಎಂದು ಸಚಿವ ಪರಮೇಶ್ವರ್ ಬಾಂಬ್ ಸಿಡಿಸಿದ್ದಾರೆ.