ಸುದ್ದಿ

ಬೆಮೆಲ್ ಸಂಸ್ಥೆಗೆ 2 ಬುಲೆಟ್ ಟ್ರೈನ್ ತಯಾರಿಸುವ ಗುತ್ತಿಗೆ

Share It

ಬೆಂಗಳೂರು: ಬೆಮೆಲ್ ಸಂಸ್ಥೆಗೆ ಎರಡು ಬುಲೆಟ್ ಟ್ರೈನ್ ತಯಾರಿಸುವ ಮಹತ್ವದ ಗುತ್ತಿಗೆ ಸಿಕ್ಕಿದ್ದು, ಟ್ರೈನ್​ನ ವಿನ್ಯಾಸ, ತಯಾರಿಕೆ ಮತ್ತು ಅಳವಡಿಕೆಯ ಕಾರ್ಯವನ್ನು ಬೆಮೆಲ್ ಮಾಡಲಿದೆ.

ಇದು 866.87 ಕೋಟಿ ರೂ ಮೊತ್ತದ ಗುತ್ತಿಗೆಯಾಗಿದೆ. ಟ್ರೈನ್​ನ ವಿನ್ಯಾಸ, ತಯಾರಿಕೆ ಮತ್ತು ಅಳವಡಿಕೆಯ ಕಾರ್ಯವನ್ನು ಬೆಮೆಲ್ ಮಾಡಲಿದೆ. ದೇಶೀಯವಾಗಿ ನಿರ್ಮಾಣವಾಗಲಿರುವ ಭಾರತದ ಮೊದಲ ಬುಲೆಟ್ ರೈಲು ಇದಾಗಲಿದೆ. ಪ್ರತಿ ರೈಲು 8ಬೋಗಿಗಳನ್ನು ಹೊಂದಿದ್ದು, ಗಂಟೆಗೆ 280 ಕಿ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಲಿದೆ.

ಬೆಂಗಳೂರಿನಲ್ಲಿ ಮುಖ್ಯಕಚೇರಿ ಮತ್ತು ಕಾರ್ಖಾನೆಗಳನ್ನು ಹೊಂದಿರುವ ಬೆಮೆಲ್, ಸಿಲಿಕಾನ್ ಸಿಟಿಯಲ್ಲೇ ಟ್ರೈನ್​ಸೆಟ್​ಗಳನ್ನು ನಿರ್ಮಿಸಲಿದೆ.
2026ರ ಕೊನೆಯಲ್ಲಿ ಇವುಗಳನ್ನು ರೈಲ್ವೆ ಇಲಾಖೆಗೆ ಒಪ್ಪಿಸುವ ಹೊಣೆ ಇದೆ.

ಭಾರತದಲ್ಲಿ ನಿರ್ಮಾಣವಾಗಿರುವ ವಂದೇ ಭಾರತ್ ರೈಲು ಕೂಡ ಹೈಸ್ಪೀಡ್ ಆಗಿದೆಯಾದರೂ ಅದು ಬುಲೆಟ್ ಟ್ರೈನ್ ವರ್ಗೀಕರಣಕ್ಕೆ ಬರುವುದಿಲ್ಲ. ಗಂಟೆಗೆ 250 ಕಿಮೀಗೂ ಹೆಚ್ಚು ವೇಗದಲ್ಲಿ ಹೋಗುವ ರೈಲುಗಳನ್ನು ಬುಲೆಟ್ ಟ್ರೈನ್ ಎಂದು ಪರಿಗಣಿಸಲಾಗುತ್ತದೆ. ಬೆಮೆಲ್​ನಿಂದ ನಿರ್ಮಾಣವಾಗಲಿರುವ ಹೈಸ್ಪೀಡ್ ಟ್ರೈನು 280 ಕಿಮೀ ವೇಗ ಹೊಂದಿರಲಿದೆ.

ಈ ರೈಲು ಸಂಪೂರ್ಣ ಹವಾನಿಯಂತ್ರಿತ ಕೋಚ್ ಹೊಂದಲಿದೆ ಹಾಗೂ ಚೇರ್ ಕಾರ್ ಗಳನ್ನು ಅಳವಡಿಸಲಾಗುತ್ತದೆ. ಅಹ್ಮದಾಬಾದ್ ಮತ್ತು ಮುಂಬೈ ನಡುವೆ ಹೈಸ್ಪೀಡ್ ರೈಲು ನೆಟ್ವರ್ಕ್ ನಿರ್ಮಿಸಲಾಗುತ್ತಿದೆ. ಇದು 2027ಕ್ಕೆ ಮುಗಿಯುವ ನಿರೀಕ್ಷೆ ಇದೆ.

ಈ ಮಾರ್ಗಕ್ಕೆ ಜಪಾನ್​ನ ಬುಲೆಟ್ ಟ್ರೈನ್ ಅನ್ನು ಓಡಿಸುವ ಇರಾದೆ ರೈಲ್ವೆ ಇಲಾಖೆಯದ್ದಾಗಿತ್ತು. ಆದರೆ, ಒಂದು ಬುಲೆಟ್ ಟ್ರೈನ್ ಬೋಗಿಗೆ 46 ಕೋಟಿ ರೂನಂತೆ ಜಪಾನೀ ಕಂಪನಿಗಳು ಬೆಲೆ ಹೇಳಿದ್ದವು. ಬೆಮೆಲ್ ಸಂಸ್ಥೆ ಪ್ರತೀ ಕೋಚ್​ಗೆ 27.86 ಕೋಟಿ ರೂನಂತೆ ಬುಲೆಟ್ ಟ್ರೈನ್ ಅನ್ನು ನಿರ್ಮಿಸಲಿದೆ.


Share It

You cannot copy content of this page