ಜಡ್ಜ್ ಎಂದು ಐದು ವರ್ಷದಿಂದ ತೀರ್ಪು ನೀಡುತ್ತಿದ್ದಾನ ಬಂಧನ
ಅಹಮದಾಬಾದ್: ನಕಲಿ ನ್ಯಾಯಾಲಯ ಸೃಷ್ಟಿಸಿ, ಐದು ವರ್ಷಗಳಿಂದ ಜಡ್ಜ್ ಎಂದು ಹೇಳಿಕೊಂಡು ತೀರ್ಪು ನೀಡುತ್ತಿದ್ದವನನ್ನು ಪೊಲೀಸರು ಬಂಧಿಸಿದ್ದಾರೆ.
ಮೊರಿಸ್ ಸ್ಯಾಮುವೆಲ್ ಕ್ರಿಸ್ತಿಯನ್ ಎಂಬಾತ ಬಂಧಿತ. ಈತ ಗುಜರಾತ್‌ನ ಗಾಂಧಿನಗರ ಪ್ರದೇಶದಲ್ಲಿ 2019ರಿಂದಲೂ ಜಡ್ಜ್ ಎಂದು ಬಿಂಬಿಸಿಕೊಂಡು ಭೂ ವ್ಯಾಜ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ತೀರ್ಪು ನೀಡುತ್ತ ಬಂದಿದ್ದ.
ಮೊರಿಸ್ ಭೂವಿವಾದಕ್ಕೆ ಸಿಲುಕಿದವರನ್ನು ಗುರುತಿಸಿ ಭಾರಿ ದಂಡದ ಬದಲು ತ್ವರಿತ ಶುಲ್ಕದ ಭರವಸೆ ನೀಡಿ ಬಲೆಗೆ ಕೆಡವಿಕೊಳ್ಳುತ್ತಿದ್ದ. ನಂತರ ತನ್ನದೇ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ತೀರ್ಪು ನೀಡುತ್ತಿದ್ದ. ಈತನ ಸಹಚರರು ನ್ಯಾಯಾಲಯ ಸಿಬ್ಬಂದಿ ರೀತಿ ವರ್ತಿಸುತ್ತಿದ್ದರು.
ಇತ್ತೀಚೆಗೆ ಭೂವಿವಾದವೊಂದಕ್ಕೆ ಸಂಬಂಧಿಸಿ ತನ್ನ ಕಕ್ಷಿದಾರನನ್ನು ಸರ್ಕಾರದ ಅಧಿಕೃತ ಮಧ್ಯಸ್ಥಿಕೆದಾರ ಎಂದು ನೇಮಿಸಿ, ಕಕ್ಷಿದಾರನ ಹೆಸರನ್ನು ಸರ್ಕಾರಿ ಭೂಮಿಯ ದಾಖಲೆಯಲ್ಲಿ ಸೇರಿಸುವಂತೆ ಜಿಲ್ಲಾಧಿಕಾರಿಗೆ ಆದೇಶ ನೀಡಿದ. ಬಳಿಕ ಜಿಲಾಧಿಕಾರಿ ಆದೇಶ ಪಾಲಿಸುವಂತೆ ಇನ್ನೊಬ್ಬ ವಕೀಲರ ಮೂಲಕ ಸಿಟಿ ಸಿವಿಲ್ ಕೋರ್ಟ್‌ಗೆ ಮನವಿ ಸಲ್ಲಿಸಿ, ತನ್ನ ನಕಲಿ ಆದೇಶವನ್ನು ಲಗತ್ತಿಸಿದ್ದ.
ಅದನ್ನು ಪರಿಶೀಲಿಸಿದ ಕೋರ್ಟ್ ರಿಜಿಸ್ಟ್ರಾರ್ ಹಾರ್ದಿಕ್ ದೇಸಾಯಿ ಅವರಿಗೆ ಅದು ನಕಲಿ ಆದೇಶ ಎಂದು ತಿಳಿದು ಪೊಲೀಸರಿಗೆ ದೂರು ನೀಡಿದ್ದರು. ನಂತರದ ತನಿಖೆಯಲ್ಲಿ ಮೊರಿಸ್ ನಕಲಿ ಜಡ್ಜ್ ಎಂಬುದು ತಿಳಿದುಬಂದಿದ್ದು, ಪೊಲೀಸರು ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. 2019ರಿಂದಲೂ ಹೀಗೆ ವಂಚಿಸುತ್ತಿದ್ದ ಮೊರಿಸ್ ವಿರುದ್ಧ 2015ರಲ್ಲಿ ಮಣಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದೂ ಕಂಡುಬಂದಿದೆ.