ಅಪರಾಧ ಆರೋಗ್ಯ ಸುದ್ದಿ

ಹೆರಿಗೆ ನೋವಿನಲ್ಲೂ ರಜೆ ಕೊಡದ ಮೇಲಾಧಿಕಾರಿ: ಹೊಟ್ಟೆಯಲ್ಲೇ ನಲುಗಿ ಪ್ರಾಣಬಿಟ್ಟ ಕಂದಮ್ಮ !

Share It


ಒಡಿಸ್ಸಾ: ಹೆರಿಗೆ ನೋವಿನ ಸಂದರ್ಭದಲ್ಲಿ ಮನವಿ ಮಾಡಿದರೂ, ರಜೆ ಪರಿಗಣಿಸದ ಮೇಲಾಧಿಕಾರಿಯ ನಡೆಯಿಂದ ಸರಕಾರಿ ನೌಕರರೊಬ್ಬರು ತಮ್ಮ ಮಗುವನ್ನೇ ಕಳೆದುಕೊಂಡ ಕರುಣಾಜನಕ ಘಟನರ ಒಡಿಸ್ಸಾದ ಕೇಂದ್ರಪರ ಜಿಲ್ಲೆಯಲ್ಲಿ ನಡೆದಿದೆ.

ಅದರಲ್ಲೂ ಈ ಘಟನೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ನಡೆದಿರುವುದು ಶೋಚನೀಯ ಸಂಗತಿ. ಏಳು ತಿಂಗಳ ಗರ್ಭಿಣಿಯಾಗಿದ್ದ ಬಾರ್ಶಾ ಪ್ರಿಯದರ್ಶಿನಿ ಎಂಬ ಇಲಾಖೆ ನೌಕರೆಯೊಬ್ಬರು, ತಮ್ಮ ಹೆರಿಗೆ ನೋವಿನ ಬಗ್ಗೆ CDPO ಗಮನಕ್ಕೆ ತಂದು, ಆಸ್ಪತ್ರೆಗೆ ಹೋಗಲು ಅನುಮತಿ ಕೇಳಿದ್ದರು. ಆದರೆ, ಅವರು ಅನುಮತಿ ನೀಡದೆ ವಿಳಂಬ ಮಾಡಿದ್ದು, ಅನಂತರ ಆಸ್ಪತ್ರೆಗೆ ದಾಖಲಿಸಲಾದರೂ, ಮಗು ಸಾವನ್ನಪ್ಪಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಸಂಬಂಧ ಬಾರ್ಶಾ ಪ್ರಿಯದರ್ಶಿನಿ, ಜಿಲ್ಲಾಧಿಕಾರಿ ಅವರಿಗೆ ದೂರು ನೀಡಿದ್ದು, ದೂರಿನಲ್ಲಿ ಹೆರಿಗೆ ನೋವಿನ ಬಗ್ಗೆ ಹೇಳಿದರೂ CDPO ಸ್ನೇಹಲತಾ ಸಾಹೋ ಎಂಬುವವರು, ಅಸಡ್ಡೆಯಿಂದ ನಡೆದುಕೊಂಡರು. ಜತೆಗೆ ಮಾನಸಿಕವಾಗಿ ಹಿಂಸೆ ನೀಡಿದರು. ಇದರ ಪರಿಣಾಮ ಮಗು ಸಾವನ್ನಪ್ಪಿದ್ದು, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದಿದ್ದಾರೆ.

ಜಿಲ್ಲಾಧಿಕಾರಿಗಳು ಈ ಕುರಿತು ಸಮಿತಿ ರಚನೆ ಮಾಡಿ, ತನಿಖೆ ನಡೆಸಿ ವರದಿ ನೀಡುವಂತೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಗೆ ಆದೇಶ ನೀಡಿದ್ದು, ತನಿಖೆಗಾಗಿ ಸಮಿತಿ ರಚನೆ ಮಾಡಿದೆ. ಈ ಸುದ್ದಿ ರಾಜ್ಯಾದ್ಯಂತ ಸದ್ದು ಮಾಡಿದ್ದು, ಸ್ವತಃ ಒಡಿಸ್ಸಾದ ಉಪಮುಖ್ಯಮಂತ್ರಿ ಪ್ರವತಿ ಫರಿದಾ ಅವರು, ಟ್ವೀಟ್ ಮಾಡಿದ್ದು, ಸೂಕ್ತ ಕ್ರಮ ತೆಗೆದುಕೊಂಡು ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಒಟ್ಟಾರೆ, ಮಕ್ಕಳು ಮತ್ತು ಗರ್ಭಿಣಿಯನ್ನು ರಕ್ಷಿಸುವ ಇಲಾಖೆಯಲ್ಲಿಯೇ ಇಂತಹ ಘಟನೆ ನಡೆದಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ನಡುವೆ ಆರೋಪಿಯಾಗಿರುವ ಸಿಡಿಪಿಒ ಸ್ನೇಹಲತಾ, ಬರ್ಶಾ ಪ್ರಿಯದರ್ಶಿನಿ ಅವರ ಸ್ಥಿತಿಯ ಬಗ್ಗೆ ನನಗೆ ಮಾಹಿತಿ ಇರಲಿಲ್ಲ ಎಂದು ಹೇಳಿದ್ದಾರೆ.


Share It

You cannot copy content of this page