ಬೌದ್ಧ ದೇವಾಲಯಗಳಿಗೆ ನೀಡುವ ದೇಣಿಗೆ ಹಣದ ರಸೀದಿಯ ಕ್ಯೂ ಆರ್ ಕೋಡನ್ನು ಬದಲಿಸಿ 30,000 ಯುವಾನ್ ($4,200) ಹಣವನ್ನು ದೋಚಿರುವ ಘಟನೆ ಚೀನಾದಲ್ಲಿ ನಡೆದಿದೆ.
ಸದ್ಯ ಬಂಧಿಸಲ್ಪಟ್ಟ ಆರೋಪಿ ಕಾನೂನು ಪದವೀಧರ ಎಂದು ತಿಳಿದು ಬಂದಿದ್ದು, ಸಿಚುವಾನ್, ಚಾಂಗ್‌ಕಿಂಗ್ ಮತ್ತು ಶಾಂಕ್ಸಿ ಒಳಗೊಂಡಂತೆ ಇತರ ದೇವಾಲಯಗಳ ಹಣ ಲೂಟಿ ಮಾಡಿರುವುದಾಗಿ ಪೊಲೀಸರ ತನಿಖೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ (SCMP) ವರದಿ ಮಾಡಿದೆ.
ಶಾಂಕ್ಸಿಯ ಪೊಲೀಸರು ಬಾವೋಜಿ ನಗರದ ಫಾಮೆನ್
ದೇವಸ್ಥಾನದ ಸಿಸಿ ಟಿವಿ ದೃಶ್ಯಾವಳಿಗಳನ್ನು ನೋಡುವ ಸಂದರ್ಭದಲ್ಲಿ ದೇಣಿಗೆ ಪೆಟ್ಟಿಗೆ ಬಳಿ ನಿಂತು ದೇವಸ್ಥಾನದ ಕ್ಯೂ ಆರ್ ಕೋಡ್ ಮೇಲೆ ತನ್ನ ಕ್ಯೂ ಆರ್ ಕೋಡ್ ಅಂಟಿಸಿ ಬುದ್ಧನಿಗೆ ಮೂರು ಬಾರಿ ನಮಸ್ಕಾರ ಮಾಡಿ ಹಣದ ಪೆಟ್ಟಿಗೆಗೆ ಒಂದಷ್ಟು ಹಣ ಹಾಕಿ ಅಲ್ಲಿಂದ ಹೊರಡುವ ದೃಶ್ಯ ಸೇರಿಯಾಗಿದೆ. ಸದ್ಯ ಕದ್ದ ಹಣವನ್ನು ಪೊಲೀಸರಿಗೆ ಒಪ್ಪಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಚೀನಾದಲ್ಲಿ ಇತ್ತೀಚೆಗೆ ಬೌದ್ಧ ದೇವಾಲಯಗಳಲ್ಲಿ ಹಣ ದೋಚುವುದು ಹೆಚ್ಚುತ್ತಿದೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ತಿಳಿಸಿದೆ.