ನವದೆಹಲಿ: ನೈಜೀರಿಯಾದ ಕೇಂದ್ರಭಾಗದ ನೈಜರ್ ರಾಜ್ಯದಲ್ಲಿ ಭಾರಿ ಮಳೆ ಮತ್ತು ಪ್ರವಾಹದಿಂದ 100ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಹಾಗೂ ಹಲವರು ಕಾಣೆಯಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಬುಧವಾರ ರಾತ್ರಿ ಆರಂಭಗೊಂಡ ಮಳೆ ಗುರುವಾರ ಬೆಳಗ್ಗೆಯವರೆಗೆ ಮುಂದುವರಿದಿದ್ದು, ಪರಿಣಾಮವಾಗಿ ಮೋಕ್ವಾ ಪಟ್ಟಣ ಪೂರ್ಣವಾಗಿ ನೆರೆಗೆ ಒಳಗಾಯಿತು. ರಾಜ್ಯ ವಿಪತ್ತು ನಿರ್ವಹಣಾ ಸಂಸ್ಥೆಯ ವಕ್ತಾರ ಇಬ್ರಾಹಿಂ ಔದು ಹುಸೇನ್ ಅವರು ಶುಕ್ರವಾರ ಮಾಹಿತಿ ನೀಡಿದ್ದು, ರಕ್ಷಣಾ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ ಎಂದು ಹೇಳಿದರು.
“ಇತ್ತೀಚಿನ ವರದಿಯ ಪ್ರಕಾರ ನಾವು 115 ಮೃತದೇಹಗಳನ್ನು ಪತ್ತೆಹಚ್ಚಿದ್ದೇವೆ. ಪ್ರವಾಹ ದೂರದ ಪ್ರದೇಶದಿಂದ ಹರಿದುಬಂದು ಜನರನ್ನು ನೈಜರ್ ನದಿಗೆ ಒಯ್ದಿದೆ. ನದಿಯ ದಡಗಳಲ್ಲಿ ಇನ್ನೂ ಮೃತದೇಹಗಳು ಪತ್ತೆಯಾಗುತ್ತಿವೆ. ಆದ್ದರಿಂದ ಸಾವಿನ ಸಂಖ್ಯೆ ಹೆಚ್ಚುತ್ತಿರುವ ಸ್ಥಿತಿಯಲ್ಲಿದೆ,” ಎಂದು ಅವರು ಎಎಫ್‌ಪಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಮೂರು ಸಾವಿರಕ್ಕಿಂತ ಹೆಚ್ಚು ಮನೆಗಳು ನೆರೆಗೆ ಒಳಪಟ್ಟಿವೆ ಎಂದು ಅವರು ಹೇಳಿದರು.
ನೈಜೀರಿಯಾದ ರಾಜಧಾನಿ ಅಬುಜದಿಂದ ಸುಮಾರು 370 ಕಿಮೀ (230 ಮೈಲಿ) ಪಶ್ಚಿಮದಲ್ಲಿರುವ ಮೋಕ್ವಾ, ನೈಜರ್ ರಾಜ್ಯದ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ಇಲ್ಲಿ ವ್ಯಾಪಾರಿಗಳು ಹಾಗೂ ಭಾರೀ ವಾಹನಗಳು ಬೇರೆ ಪ್ರದೇಶಗಳಿಗೆ ಸರಕು ಸಾಗಣೆ ಮಾಡುತ್ತಿರುತ್ತವೆ.
ನೈಜೀರಿಯಾದಲ್ಲಿ ಏಪ್ರಿಲ್‌ನಿಂದ ಅಕ್ಟೋಬರ್ ವರೆಗೆ ಮಳೆಯ ಕಾಲವಾಗಿರುತ್ತದೆ. ಬುಧವಾರದಂದು ನೈಜೀರಿಯಾದ ಹವಾಮಾನ ಇಲಾಖೆ ಅಬುಜಾ ಮತ್ತು ನೈಜರ್ ಸೇರಿದಂತೆ 36 ರಾಜ್ಯಗಳಲ್ಲಿ 14 ರಾಜ್ಯಗಳಿಗೆ ಭಾರೀ ಮಳೆಯ ಮುನ್ಸೂಚನೆ ನೀಡಿತ್ತು.