ಕಲ್ಯಾಣದಲ್ಲಿ ಮಳೆಯ ಆರ್ಭಟ, ರೈತರ ಪರದಾಟ
ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಕೇಂದ್ರ ಸ್ಥಾನವಾಗಿರುವ ಕಲಬುರಗಿ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ನಿರಂತರ ಧಾರಾಕಾರ ಮಳೆಯ ಪರಿಣಾಮವಾಗಿ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಜಲಾಶಯಗಳ ನೀರು ನದಿಗೆ ಹರಿಬಿಟ್ಟ ಪರಿಣಾಮ ಜಮೀನುಗಳಿಗೆ ನೀರು ನುಗ್ಗಿ ರೈತರ ವಾಣಿಜ್ಯ ಬೆಳೆಗಳು ಹಾನಿಗೀಡಾಗಿವೆ.
ಜಿಲ್ಲೆಯ ಪ್ರಮುಖ ಬೆಳೆಗಳಾದ ಉದ್ದು, ಹೆಸರು ನೀರಿನಲ್ಲಿ ಕೊಚ್ಚಿ ಹೋಗಿದ್ದು, ಭಾಗದ ಬಹು ಬೆಳೆಯಾದ ತೊಗರಿ ಸಹ ನಾಶದತ್ತ ಸಾಗುತ್ತಿದೆ. ಇದರಿಂದ ರೈತಾಪಿ ವರ್ಗ ಸಂಕಟಕ್ಕೆ ಸಿಲುಕಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ.
ಜ. ೧ರಿಂದ ಆ. ೧೮ರವರೆಗೆ ವಾಡಿಕೆ ಪ್ರಕಾರ ಸರಾಸರಿ ೪೦೯ ಮಿ.ಮೀ. ಮಳೆಯಾಗಬೇಕಿದ್ದರೆ, ೬೧೩ ಮಿ.ಮೀ. ಮಳೆಯಾಗಿದೆ. ಅಂದರೆ, ಶೇಕಡಾ ೫೦ ಹೆಚ್ಚು ಮಳೆಯಾಗಿದೆ. ಅಫಜಲಪುರ, ಚಿಂಚೋಳಿ, ಆಳಂದ, ಸೇಡಂ ತಾಲೂಕುಗಳಲ್ಲಿ ಸಾಲಮಾಡಿ ಬಿತ್ತನೆ ಮಾಡಿದ ಹೆಸರು, ಉದ್ದು, ತೊಗರಿ ಬೆಳೆಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದು, ರೈತರ ಬದುಕಿಗೆ ಭಾರೀ ಹೊಡೆತ ಬಿದ್ದಂತಾಗಿದೆ.
ಜಿಲ್ಲೆಯಲ್ಲಿ ಒಟ್ಟು ೬.೩೦ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಗುರಿ ಇಟ್ಟುಕೊಳ್ಳಲಾಗಿದ್ದು, ಈಗಾಗಲೇ ೬ ಲಕ್ಷಕ್ಕೂ ಅಧಿಕ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ಆದರೆ, ನೀರಿನ ಅತಿಯಾದ ತೇವಾಂಶದಿಂದಾಗಿ ಶೇಕಡಾ ೪೦ರಷ್ಟು ತೊಗರಿ ಬೇರು ಕೊಳೆತು ಹಾನಿಯಾಗುತ್ತಿದೆ.
ಬಾಕ್ಸ್:
ಜಲಾಶಯಗಳ ಸ್ಥಿತಿ
• ಅಮರ್ಜಾ ಜಲಾಶಯ: ಸಾಮರ್ಥ್ಯ 1,554 ಟಿಎಂಸಿ, ಸಂಗ್ರಹ 1,220 ಟಿಎಂಸಿ
• ಬೆಣ್ಣೆತೋರಾ ಜಲಾಶಯ: ಸಾಮರ್ಥ್ಯ 5,297 ಟಿಎಂಸಿ, ಸಂಗ್ರಹ 4,447 ಟಿಎಂಸಿ
• ಭೀಮಾ ಲಿಫ್ಟ್ ಇರೀಗೇಶನ್: ಸಾಮರ್ಥ್ಯ 3,166 ಟಿಎಂಸಿ, ಸಂಗ್ರಹ 2,198 ಟಿಎಂಸಿ
• ಚಂದ್ರಂಪಳ್ಳಿ ಜಲಾಶಯ: ಸಾಮರ್ಥ್ಯ 1,208 ಟಿಎಂಸಿ, ಸಂಗ್ರಹ 0.973 ಟಿಎಂಸಿ
• ಗುಂಡೋರಿ ನಾಲಾ: ಸಾಮರ್ಥ್ಯ 1,887 ಟಿಎಂಸಿ, ಸಂಗ್ರಹ 1,534 ಟಿಎಂಸಿ
• ಲೋವರ್ ಮುಲ್ಲಾಮಾರಿ: ಸಾಮರ್ಥ್ಯ 1,736 ಟಿಎಂಸಿ, ಸಂಗ್ರಹ 1,332 ಟಿಎಂಸಿ
ಬಾಕ್ಸ್:
ಜಿಲ್ಲಾವಾರು ಮಳೆ ಹೋಲಿಕೆ (ಜು.1 – ಆ.18)
• ಕಲಬುರಗಿ: ವಾಡಿಕೆ – 409 ಮಿ.ಮೀ | ಬಿದ್ದ ಮಳೆ – 613 ಮಿ.ಮೀ (50% ಹೆಚ್ಚು)
• ಬೀದರ್: 477 ಮಿ.ಮೀ | 473 ಮಿ.ಮೀ
• ಯಾದಗಿರಿ: 370 ಮಿ.ಮೀ | 543 ಮಿ.ಮೀ (47% ಹೆಚ್ಚು)
• ರಾಯಚೂರು: 311 ಮಿ.ಮೀ | 469 ಮಿ.ಮೀ (51% ಹೆಚ್ಚು)
• ಕೊಪ್ಪಳ: 275 ಮಿ.ಮೀ | 431 ಮಿ.ಮೀ (57% ಹೆಚ್ಚು)
• ಬಳ್ಳಾರಿ: 260 ಮಿ.ಮೀ | 319 ಮಿ.ಮೀ
• ವಿಜಯನಗರ: 323 ಮಿ.ಮೀ | 430 ಮಿ.ಮೀ
ಕೋಟ್:
ಬೆಣ್ಣೆತೋರಾ ಜಲಾಶಯದ ನೀರು ಹರಿದು ಜಮೀನುಗಳಿಗೆ ನುಗ್ಗಿವೆ. ಕಟಾವಿಗೆ ಬಂದಿದ್ದ ಉದ್ದು-ಹೆಸರು ಸಂಪೂರ್ಣ ಹಾಳಾಗಿವೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ಸಾಲ ತೀರಿಸುವುದು ಕಷ್ಟವಾಗಲಿದೆ.
- ದಶರಥ್ ಹೆಬ್ಬಾಳ,ರೈತ
ಕೋಟ್:
ನಿರಂತರ ಮಳೆಯಿಂದ ಜಿಲ್ಲೆಯ ಪ್ರಮುಖ ಬೆಳೆ ಶೇಕಡಾ ೪೦ರಷ್ಟು ತೊಗರಿ ಬೇರು ಕೊಳೆತು ಹಾನಿಯಾಗಿದೆ. ತಕ್ಷಣವೇ ಬೆಳೆ ಹಾನಿ ಸರ್ವೇ ಮಾಡಿ ಪರಿಹಾರ ಘೋಷಿಸಬೇಕು.
⁃ ಶರಣಬಸಪ್ಪ ಮಮಶೆಟ್ಟಿ, ಜಿಲ್ಲಾ ಅಧ್ಯಕ್ಷ, ಕೆಪಿಆರ್ಎಸ್
————
ಮುಖ್ಯಾಂಶಗಳು
• ಕಲಬುರಗಿಯಲ್ಲಿ 613 ಮಿ.ಮೀ. ಮಳೆ – ವಾಡಿಕೆಗಿಂತ 50% ಹೆಚ್ಚು
• ತೊಗರಿ, ಉದ್ದು, ಹೆಸರು ಬೆಳೆ ನಾಶ – ರೈತರ ಆರ್ಥಿಕ ಸ್ಥಿತಿ ಸಂಕಷ್ಟ
• ಬೆಳೆ ಹಾನಿ ಸರ್ವೇ, ಪರಿಹಾರಕ್ಕೆ ರೈತರ ಒತ್ತಾಯ
• ಜಲಾಶಯಗಳು ತುಂಬಿ ಹರಿಯುತ್ತಿದ್ದು, ನದಿಗಳು ಉಕ್ಕಿ ಹರಿಯುವ ಭೀತಿ