ಕಾಕನೂರು SBI ದರೋಡೆ ಪ್ರಕರಣ: ಮಹಾರಾಷ್ಟ್ರದಲ್ಲಿ ದರೋಡೆಕೋರರ ಬಂಧನ
ಬಾಗಲಕೋಟೆ:ಕಾಕನೂರ SBI ಬ್ಯಾಂಕ್ ಕಳ್ಳತನ ಪ್ರಕರಣದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, 62.20 ಲಕ್ಷ ರು. ಮೌಲ್ಯದ ಬಂಗಾರ ಮತ್ತು ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
“ಬಾದಾಮಿ ಪೊಲೀಸ್ ಠಾಣೆ ವ್ಯಾಪ್ತಿಯ ಕಾಕನೂರ ಎಸ್‌ಬಿಐ ಬ್ಯಾಂಕ್ ಕಳ್ಳತನ ಪ್ರಕರಣವನ್ನು ಬಾಗಲಕೋಟೆ ಜಿಲ್ಲಾ ಪೊಲೀಸರ ತಂಡ ಭೇದಿಸಿದ್ದು, ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶ ಮೂಲದ ನಾಲ್ವರು ಆರೋಪಿತರನ್ನು ಬಂಧಿಸಿ ಒಟ್ಟು 62.20 ಲಕ್ಷ ಮೌಲ್ಯದ ಬಂಗಾರ ಮತ್ತು ನಗದನ್ನು ವಶಪಡಿಸಿಕೊಂಡಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ಮಾರ್ಗದರ್ಶನದಲ್ಲಿ, ಸಿಪಿಐ ಕೆ.ಬಿ.ಬನ್ನೆ ನೇತೃತ್ವದ ತಂಡ ಮಹಾರಾಷ್ಟ್ರದಲ್ಲಿ ಮಾಹಿತಿ ಸಂಗ್ರಹಿಸಿ, ಪರಾರಿಯಾಗಿದ್ದ ಆರೋಪಿಗಳಾದ ಅಕ್ಷಯ ಅಂಬೋರೆ ಹಾಗೂ ಕುನಾಲ್ ಅವರನ್ನು ಬಂಧಿಸಿತು. ಆರೋಪಿಗಳು ವಿಚಾರಣೆ ವೇಳೆ ಗ್ಯಾಸ್ ಸಿಲಿಂಡರ್, ಆಕ್ಸಿಜನ್ ಸಿಲಿಂಡರ್, ಗ್ಯಾಸ್ ಕಟರ್ಗಳ ನೆರವಿನಿಂದ ಬ್ಯಾಂಕ್ ಹಿಂಬದಿಯಿಂದ ಪ್ರವೇಶಿಸಿ ಲಾಕರ್‌ಗಳನ್ನು ಕತ್ತರಿಸಿ ಬಂಗಾರ ಮತ್ತು ನಗದು ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಆರೋಪಿಗಳ ಮಾಹಿತಿ ಮೇರೆಗೆ ಕೃತ್ಯಕ್ಕೆ ಬಳಸಿದ ಸಾಧನಗಳು ಹಾಗೂ ಕಾರನ್ನು ಜಪ್ತಿ ಮಾಡಲಾಗಿದೆ.
ಮಹಾರಾಷ್ಟ್ರದಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದ 4.05 ಲಕ್ಷ ರು. ಮೌಲ್ಯದ 30 ಗ್ರಾಂ ಬಂಗಾರ, 1.25 ಲಕ್ಷ ರು. ನಗದು, ಕಂಟ್ರಿಮೇಡ್ ಪಿಸ್ತೂಲ್ ಹಾಗೂ ಮೂರು ಜೀವಂತ ಗುಂಡುಗಳು, ಜತೆಗೆ ತೆಲಂಗಾಣದ ರಾಯಪರ್ತಿ ಪೊಲೀಸ್ ಠಾಣೆ ವ್ಯಾಪ್ತಿಯ ಎಸ್‌ಬಿಐ ಬ್ಯಾಂಕ್ ಕಳ್ಳತನ ಪ್ರಕರಣದ 30.60 ಲಕ್ಷ ರು. ಮೌಲ್ಯದ 244.20 ಗ್ರಾಂ ಬಂಗಾರದ ಆಭರಣಗಳನ್ನೂ ವಶಪಡಿಸಿಕೊಳ್ಳಲಾಗಿದೆ.
ಈ ಮೊದಲು ಇದೇ ಪ್ರಕರಣದಲ್ಲಿ ಉತ್ತರ ಪ್ರದೇಶದ ಇಬ್ಬರು ಆರೋಪಿಗಳನ್ನು ಬಂಧಿಸಿ 26.30 ಲಕ್ಷ ರು. ಮೌಲ್ಯದ ಬಂಗಾರ ಮತ್ತು ನಗದು ಜಪ್ತಿ ಮಾಡಲಾಗಿತ್ತು. ಇದರಿಂದ ಒಟ್ಟು ಆರು ಆರೋಪಿಗಳ ಪೈಕಿ ನಾಲ್ವರನ್ನು ಬಂಧಿಸಲಾಗಿದ್ದು, 472.20 ಗ್ರಾಂ ಬಂಗಾರ ಹಾಗೂ ನಗದು ಸೇರಿ 62.20 ಲಕ್ಷ ರು. ಮೌಲ್ಯದ ಸ್ವತ್ತು ವಶಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ ಸಿಪಿಐ ಕೆ.ಬಿ.ಬನ್ನೆ, ಪಿಎಸ್‌ಐ ವಿಜಯಕುಮಾರ ರಾಠೋಡ ಸೇರಿ ಬಾದಾಮಿ, ಕೆರೂರ, ಗುಳೇದಗುಡ್ಡ ಠಾಣೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು. ಯಶಸ್ವಿ ಕಾರ್ಯಾಚರಣೆಗೆ ಜಿಲ್ಲಾ ಪೊಲೀಸ್ ಅಧೀಕ್ಷಕರು ತಂಡವನ್ನು ಪ್ರಶಂಸಿಸಿ, ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಬಹುಮಾನ ಘೋಷಿಸಿದ್ದಾರೆ.


