ರಾಜಕೀಯ ಸುದ್ದಿ

ಸಿಬಿಐಗೆ ನಿರ್ಬಂಧ ; ಸಿಎಂ ಸಿದ್ದರಾಮಯ್ಯ ವಿರುದ್ಧ HD ಕುಮಾರಸ್ವಾಮಿ ಕೆಂಡ

Share It


ಬೆಂಗಳೂರು: ರಾಜ್ಯದಲ್ಲಿ ಕೇಂದ್ರೀಯ ತನಿಖಾ ದಳದ (ಸಿಬಿಐ) ಪ್ರವೇಶಕ್ಕೆ ಇದ್ದ ಮುಕ್ತ ಅವಕಾಶವನ್ನು ಹಿಂಪಡೆದಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಕಟುವಾಗಿ ಟೀಕಿಸಿದ್ದಾರೆ.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ಸಚಿವರು; ಸಿಬಿಐಗೆ ನಿರ್ಭಂದ ಹಾಕಿರುವುದು ಎಂದರೆ ಮುಖ್ಯಮಂತ್ರಿ ಮೂಡಾ ಅಕ್ರಮ ಒಪ್ಪಿಕೊಂಡಂತೆ ಆಗಿದೆ ಎಂದಿದ್ದಾರೆ.

ವ್ಯಂಗ್ಯವಾಗಿ ಕುಟುಕಿರುವ ಕೇಂದ್ರ ಸಚಿವರು; ಶ್ರೀಮಾನ್ ಸಿದ್ದರಾಮಯ್ಯನವರೇ, ನಿಮ್ಮ ‘ಸಿದ್ವಿಲಾಸ’ಕ್ಕೆ ಉಘೇಉಘೇ ಎನ್ನಲೇಬೇಕು ಎಂದು ಲೇವಡಿ ಮಾಡಿದ್ದಾರೆ.

ಅಂದು ಹಗರಣಗಳಿಂದ ಪಾರಾಗಲು ಲೋಕಾಯುಕ್ತಕ್ಕೇ ಸಮಾಧಿ ಕಟ್ಟಿ ಎಸಿಬಿ ರಚನೆ ಮಾಡಿಕೊಂಡಿರಿ! ಇಂದು ಮೂಡಾಗರಣದಿಂದ ಬಚಾವಾಗಲು ನಿಮಗೀಗ ಅದೇ ಲೋಕಾಯುಕ್ತವೇ ಗತಿ!! ಆಗಿದೆ. ಕರ್ಮ ಹಿಟ್ ಬ್ಯಾಕ್ (Karma Hit back) ಎಂದರೇ ಇದೇ ಅಲ್ಲವೇ ಸಿದ್ದರಾಮಯ್ಯನವರೇ? ಎಂದು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.

ನಿಮ್ಮ ಗ್ರಹಚಾರಕ್ಕೆ ಎಸಿಬಿಯನ್ನೂ ಹೈಕೋರ್ಟ್ ಬರ್ಖಾಸ್ತು ಮಾಡಿಬಿಟ್ಟಿತು. ಈಗ ಲೋಕಾಯುಕ್ತವನ್ನೇ ಗುರಾಣಿ ಮಾಡಿಕೊಂಡು ಸಿಬಿಐ ರಾಜ್ಯ ಪ್ರವೇಶಕ್ಕೆ ಸಂಪುಟದಿಂದ ಬಾಗಿಲು ಬಂದ್ ಮಾಡಿಸಿದ್ದೀರಿ. ಅಲ್ಲಿಗೆ ಆರೋಪಿ ಅಪರಾಧಿಯಾದ ಎಂದೇ ಲೆಕ್ಕ. ‘ಸಿದ್ದಾಪರಾದ’ ಸಾಬೀತಿಗೆ ಇನ್ನೊಂದೇ ಹೆಜ್ಜೆ ಬಾಕಿ ಇದೆ ಎಂದು ಕೇಂದ್ರ ಸಚಿವರು ಸಿಎಂಗೆ ಟಾಂಗ್ ನೀಡಿದ್ದಾರೆ.

ನಾನು ಭಾವಿಸಿದಷ್ಟು ಧೈರ್ಯವಂತರಲ್ಲ ನೀವು. ನಿಮಗೂ ಭಯವಿದೆ! ಅದೇ ಈ ನೆಲದ ಕಾನೂನಿನ ಶಕ್ತಿ. ಏನಂತೀರಿ ಸಿದ್ಧರಾಮಯ್ಯ ನವರೇ? ಎಂದು ಕೇಂದ್ರ ಸಚಿವರು ಕಾಲೆದಿದ್ದಾರೆ.


Share It

You cannot copy content of this page