ಸಕಲೇಶಪುರ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಗಾಂಜಾ ಕೇಸಿನಲ್ಲಿ ಸಿಲುಕಿಸಲು ಹೋಗಿ ತಾವೇ ಸಿಕ್ಕಿಹಾಕಿಕೊಂಡ ಘಟನೆ ಸಕಲೇಶಪುರದಲ್ಲಿ ನಡೆದಿದೆ.
ಮೂಡಿಗೆರೆ ಮೂಲದ ಕಾಫಿ ಬೆಳೆಗಾರ ಬಕಾರ್ ಉಸಾಮ ಮಹಮ್ಮದ್, ಅಟೋಚಾಲಕ ಹೈದರ ಅಲಿ, ಸಜಾದ್ ಹಾಗೂ ಮುಬಾರಕ್ ಬಂಧಿತರು. ಬಂಧಿತರಿಂದ 1.ಕೆ.ಜಿ.130 ಗ್ರಾಂ ಗಾಂಜಾ ಹಾಗೂ ಜೀಪ್ ಹಾಗೂ ಆಟೋವನ್ನು ವಶಪಡಿಸಿಕೊಳ್ಳಲಾಗಿದೆ.
ಸಕಲೇಶಪುರದ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂ ಮೂಲದ ಮುಕ್ತಾರ್ ಅಲಿ ಎಂಬಾತನ ಪತ್ನಿ ಜತೆ ಮಹಮದ್ ಎಂಬಾತ ಅಕ್ರಮ ಸಂಬಂಧ ಹೊಂದಿದ್ದ. ಈ ಹಿನ್ನೆಲೆ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಮುಕ್ತಾರ್ ಅಲಿಯನ್ನು ಪೊಲೀಸರು ಬಂಧಿಸುವಂತೆ ಮಾಡಲು ಆರೋಪಿ ಮಹಮದ್ ಹಾಗೂ ಮೂವರ ತಂಡ ಖತರ್ನಾಕ್ ಪ್ಲಾನ್ ಮಾಡಿದ್ದರು.
ಅದರಂತೆ ಚಿಕ್ಕಮಗಳೂರು ನೋಂದಣಿಯ KA-18-P-9557 ನಂಬರ್ನ ಥಾರ್ ವಾಹನದಲ್ಲಿ ಗಾಂಜಾ ತಂದಿದ್ದ ನಾಲ್ವರು, ಮುಕ್ತಾರ್ ಅಲಿಗೆ ಗಾಂಜಾ ಕೊಟ್ಟು ಪೊಲೀಸರಿಗೆ ಮಾಹಿತಿ ನೀಡಲು ತಯಾರಿ ನಡೆಸಿದ್ದರು. ಈ ವೇಳೆ ಅನುಮಾನಗೊಂಡ ಪೊಲೀಸರು ಪರಿಶೀಲನೆ ನಡೆಸಿದಾಗ ಗಾಂಜಾ ಸಿಕ್ಕಿದ್ದು, ಸಧ್ಯ ಮಾಲು ಸಮೇತ ನಾಲ್ವರು ಹಾಗೂ ಥಾರ್ ಜೀಪ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.