ಬೆಂಗಳೂರು: ರಾಜ್ಯ ಸರಕಾರ ಮಣ್ಣು ತಿನ್ನುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದರು.
ನಗರದಲ್ಲಿ ಮಾತನಾಡಿದ ಅವರು, ತಲತಲಾಂತರದಿಂದ ಇದ್ದ ಪಿತ್ರಾರ್ಜಿತ ಆಸ್ತಿಯನ್ನು ರಾತ್ರೋರಾತ್ರಿ ವಕ್ಫ್ ಪ್ರಾಪರ್ಟಿ ಎಂದು ಘೋಷಿಸಿದರೆ ರೈತರು ಬೀದಿಗೆ ಬಂದು ಏನು ಮಾಡಬೇಕು ಎಂದು ಪ್ರಶ್ನಿಸಿದರು. ನಾವಿದರ ವಿರುದ್ಧ ಹೋರಾಟ ಮಾಡುತ್ತೇವೆ; ರೈತರಿಗೆ ಧ್ವನಿಗೂಡಿಸುತ್ತೇವೆ; ಅವರ ಬೆಂಬಲಕ್ಕೆ ನಿಲ್ಲುವುದಾಗಿ ಹೇಳಿದರೆ ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ ಎಂದು ನಮ್ಮ ಮೇಲೆ ಆರೋಪ ಮಾಡುತ್ತಾರೆ ಎಂದು ಟೀಕಿಸಿದರು.
ಈ ರೀತಿ ಅಲ್ಪಸಂಖ್ಯಾತರನ್ನು ಎತ್ತಿಕಟ್ಟುವ, ಈ ದೇಶವನ್ನು ಜಾತಿ, ಧರ್ಮದ ಆಧಾರದಲ್ಲಿ ವಿಭಜಿಸುವ ಕೆಲಸವನ್ನು ಕಾಂಗ್ರೆಸ್ ಹಿಂದಿನಿಂದಲೂ ಮಾಡುತ್ತ ಬರುತ್ತಿದೆ. ಅದೇನಿಟ್ಟಿನಲ್ಲಿ ಜಮೀರ್ ಅಹ್ಮದ್ ನೇತೃತ್ವದಲ್ಲಿ ರಾಜ್ಯದಲ್ಲಿ ಬೆಂಕಿ ಹಚ್ಚುವ ಕೆಲಸ ನಡೆದಿದೆ. ಅವರ ನೇತೃತ್ವದಲ್ಲೇ ರೈತರಿಗೆ ಅನ್ಯಾಯ ಮಾಡುವ ಕೆಲಸ ಆಗುತ್ತಿದೆ ಎಂದು ತಿಳಿಸಿದರು.
ನಿನ್ನೆ ಸಚಿವರು 120 ಜನ ರೈತರಿಗೆ ನೋಟಿಸ್ ಕೊಟ್ಟಿದ್ದನ್ನು ಒಪ್ಪಿಕೊಂಡಿದ್ದಾರೆ. ಅದಕ್ಕೆ ಬಿಜೆಪಿ ಹೊಣೆಗಾರನೇ? ಅದಕ್ಕೆ ಬಿಜೆಪಿ ಕಾರಣವೇ? ಇದನ್ನು ಬಿಜೆಪಿ ಗಟ್ಟಿಯಾಗಿ ತೆಗೆದುಕೊಳ್ಳದೆ ಇದ್ದರೆ ರಾಜ್ಯ ಸರಕಾರದ ಕ್ರಮದಿಂದ ನೂರಾರು ವರ್ಷಗಳಿಂದ ಉಳುಮೆ ಮಾಡುತ್ತಿದ್ದ ರೈತರು ಬೀದಿಗೆ ಬರಬೇಕಾಗುತ್ತಿತ್ತು ಎಂದು ವಿಶ್ಲೇಷಿಸಿದರು.
ಬಿಜೆಪಿ ರೈತರ ಜೊತೆ ದೃಢವಾಗಿ ನಿಲ್ಲಲಿದೆ…
ಕಾಂಗ್ರೆಸ್ಸಿನವರು ಈಗ ಟಾಸ್ಕ್ ಫೋರ್ಸ್ ಮಾಡಿದ್ದೇವೆ; ಜಿಲ್ಲಾಧಿಕಾರಿಗಳಿಗೆ ಹೋಗಿ ಮನವಿ ಕೊಡಲಿ; ಈ ರೀತಿ ಆಟವನ್ನು ಶುರು ಮಾಡಿದ್ದಾರೆ ಎಂದು ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದರು.
ಬಳಿಕ ಪ್ರಶ್ನೆಗೆ ಉತ್ತರಿಸಿದ ಅವರು, ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ನೇತೃತ್ವದಲ್ಲಿ ಬಿಜೆಪಿ ತಂಡ ಈಗಾಗಲೇ ಬಿಜಾಪುರ ತಲುಪಿದೆ. ಬಿಜಾಪುರ ಜಿಲ್ಲೆಯ ಎಲ್ಲ ತಾಲ್ಲೂಕುಗಳಿಗೆ ಭೇಟಿ ಕೊಟ್ಟು ರೈತರನ್ನು ಸಂಪರ್ಕಿಸಿ ಅವರಿಗೆ ಧೈರ್ಯ ತುಂಬುವ ಕಾರ್ಯ ಮಾಡಲಿದ್ದಾರೆ ಎಂದರು.
ಬಿಜೆಪಿ ವಿಚಾರ ಸ್ಪಷ್ಟವಾಗಿದೆ. ರಾಜ್ಯ ಸರಕಾರ ರೈತರಿಗೆ ತೊಂದರೆ ಕೊಡುವ ಕೆಲಸ ಮಾಡುತ್ತಿದ್ದು, ಬಿಜೆಪಿ ರೈತರ ಪರ ಇದೆ. ನಾವು ಅವರ ಜತೆಯಲ್ಲಿದ್ದೇವೆ. ರೈತರ ಸಮಸ್ಯೆ ಪರಿಹಾರಕ್ಕೆ ನಾವು ಸಂಪೂರ್ಣ ಸಹಕಾರ ನೀಡುತ್ತೇವೆ. ಕಾನೂನಿನ ಸಹಾಯ ಸೇರಿ ಯಾವುದೇ ರೀತಿಯ ಸಹಕಾರವನ್ನು ಬಿಜೆಪಿ ಕೊಡಲಿದ್ದು, ಅವರ ಜತೆ ನಿಲ್ಲಲಿದೆ ಎಂದು ತಿಳಿಸಿದರು.
ನಿಖಿಲ್ ಕುಮಾರಸ್ವಾಮಿ, ಹಿರಿಯರಾದ ಮಾಜಿ ಪ್ರಧಾನಮಂತ್ರಿ ದೇವೇಗೌಡರ ಮೊಮ್ಮಗ ಇರಬಹುದು; ಆದರೆ, ಅವರು ಎನ್‍ಡಿಎ ಅಭ್ಯರ್ಥಿ. ಅವರನ್ನು ಗೆಲ್ಲಿಸುವ ಕರ್ತವ್ಯ ನಮ್ಮೆಲ್ಲರದು. ಹುಚ್ಚುಚ್ಚಾಗಿ ಆಡಿ ಪಕ್ಷ ಬಿಟ್ಟು ಹೋಗಿದ್ದಾರೆ; ಇವೆಲ್ಲವನ್ನೂ ಆ ಕ್ಷೇತ್ರದ ಜನರೂ ಗಮನಿಸುತ್ತಿದ್ದಾರೆ. ಈ ವಯಸ್ಸಿನಲ್ಲೂ ಮಾಜಿ ಪ್ರಧಾನಮಂತ್ರಿ ದೇವೇಗೌಡರ ಉತ್ಸಾಹ ಮೆಚ್ಚಬೇಕು ಎಂದರು.
ಯುವಕರಿಗೂ ದೇವೇಗೌಡರು ಪ್ರೇರಣೆ. ಅವರು ಬಂದು ಪ್ರಚಾರ ಮಾಡುತ್ತಾರೆಂದರೆ ಕಾಂಗ್ರೆಸ್ ಗೆ ಆತಂಕ ಶುರುವಾಗಿದೆ. ದೇವೇಗೌಡರು ಬಂದರೆ ಕ್ಷೇತ್ರ ಉಳಿಸಿಕೊಳ್ಳಲು ಸಾಧ್ಯವಿಲ್ಲ ಅನ್ನುವ ಸತ್ಯ ಅವರಿಗೆ ಅರ್ಥವಾಗಿದೆ. ಹಾಗಾಗಿ, ಮನಬಂದಂತೆ ಮಾತನಾಡುತ್ತಿದ್ದಾರೆ ಎಂದು ಹೇಳಿದರು.
ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಸಂಬಂಧ ಏಕಸದಸ್ಯ ಆಯೋಗ ರಚಿಸಿದ ಕುರಿತ ಪ್ರಶ್ನೆಗೆ ಉತ್ತರ ನೀಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಒಳ ಮೀಸಲಾತಿ ವಿಚಾರದಲ್ಲಿ ಪ್ರಾಮಾಣಿಕತೆ ಇದ್ದರೆ, ಕಾಂತರಾಜ್ ವರದಿ ಕುರಿತು ಗಂಭೀರತೆ ಇರುತ್ತಿದ್ದರೆ ಬಹಳಷ್ಟು ಹಿಂದೆಯೇ, ಇದರ ಕುರಿತು ಕ್ರಮ ಕೈಗೊಳ್ಳುತ್ತಿದ್ದರು ಎಂದರು.
ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ರಾಜಕೀಯ ಲಾಭ ಪಡೆಯಲು ಯೋಚಿಸುತ್ತದೆ. ಈ ವಿಚಾರದಲ್ಲಿ ಹೆಚ್ಚು ಗೊಂದಲ ಮೂಡಿಸುವ ಬಗ್ಗೆ ಅವರು ಪ್ರಯತ್ನಿಸುತ್ತಾರೆ. ಮುಖ್ಯಮಂತ್ರಿಗಳು ಈ ವಿಚಾರದಲ್ಲಿ ಪ್ರಾಮಾಣಿಕತೆ ಹೊಂದಿಲ್ಲ ಎಂಬುದು ನನ್ನ ಭಾವನೆ. ಉಪ ಚುನಾವಣೆ ಕಾರಣಕ್ಕೆ ಈ ವಿಚಾರವನ್ನು ತರುತ್ತಿದ್ದಾರೆ; ಈ ವಿಷಯದಲ್ಲಿ ಅವರಿಗೆ ಬದ್ಧತೆ ಇಲ್ಲ ಎಂದು ನುಡಿದರು.