ಬೆಂಗಳೂರು: ಗುತ್ತಿಗೆದಾರನಿಗೆ ಜೀವ ಬೆದರಿಕೆ ಹಾಕಿದ ಹಾಗೂ ಪರಿಶಿಷ್ಟ ಸಮುದಾಯವನ್ನು ಅವಾಚ್ಯವಾಗಿ ನಿಂದಿಸಿದ ಕಾರಣಕ್ಕೆ ಬಂಧನವಾಗಿರುವ ರಾಜರಾಜೇಶ್ವರಿ ನಗರ ಬಿಜೆಪಿ ಶಾಸಕ ಮುನಿರತ್ನನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿ ನ್ಯಾಯಾಲಯ ಆದೇಶಿಸಿದೆ.
ಪ್ರಕರಣಕ್ಕೆ ಸಂಬಂಧಿಸಿ ವೈಯ್ಯಾಲಿ ಕಾವಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ಮುನಿರತ್ನ ಪರಾರಿಯಾಗಲು ಯತ್ನಿಸಿದ್ದರು. ಆಂಧ್ರಪ್ರದೇಶದ ಕಡೆಗೆ ಹೊರಟಿದ್ದ ಅವರನ್ನು ಕೋಲಾರ ಪೊಲೀಸರು ಬಂಧಿಸಿ, ಬೆಂಗಳೂರು ಪೊಲೀಸರಿಗೆ ಒಪ್ಪಿಸಿದರು.
ವಶಕ್ಕೆ ಪಡೆದ ಬೆಂಗಳೂರು ಪೊಲೀಸರು, ಸಂಜೆಯೇ ಬೆಂಗಳೂರಿಗೆ ಕರೆತಂದು ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದರು. ನಂತರ ಯಲಹಂಕ ಬಳಿಯ ಕೋಗಿಲು ಕ್ರಾಸ್ ನ ನ್ಯಾಯಾಧೀಶರ ನಿವಾಸಕ್ಕೆ ಕರೆದೊಯ್ಯಲಾಯಿತು.
ನ್ಯಾಯಮೂರ್ತಿ ಸಂತೋಷ್ ಗಜಾಜನ್ ಭಟ್ ಅವರ ಮುಂದೆ ಹಾಜರುಪಡಿಸಿದ ಪೊಲೀಸರು, ಮುನಿರತ್ನ ಅವರನ್ನು ಒಂದು ವಾರಗಳ ಕಾಲ ಪೊಲೀಸ್ ಕಸ್ಟಡಿಗೆ ಕೊಡಬೇಕು ಎಂದು ಮನವಿ ಮಾಡಿಕೊಂಡರು. ಆದರೆ, ನ್ಯಾಯಾಧೀಶರು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದರು.
ಶಾಸಕ ಮುನಿರತ್ನ, ಗುತ್ತಿಗೆದಾರ ಚೆಲುವರಾಜು ಎಂಬಾತನಿಂದ ಕಸ ವಿಲೇವಾರಿ ಟೆಂಡರ್ ಸಂಬಂಧ 30 ಲಕ್ಷ ಹಣಕ್ಕೆ ಬೇಡಿಕೆಯಿಟ್ಟಿದ್ದರು ಎನ್ನಲಾಗಿರುವ ಆಡಿಯೋ ವೈರಲ್ ಆಗಿತ್ತು. ಅದರಲ್ಲಿ ಗುತ್ತಿಗೆದಾರನಿಗೆ ಜೀವಬೆದರಿಕೆ ಹಾಕಿರುವುದು ಹಾಗೂ ಪರಿಶಿಷ್ಟ ಸಮುದಾಯಕ್ಕೆ ಅವಮಾನವಾಗುವ ರೀತಿಯಲ್ಲಿ ಹೇಳಿಕೆ ನೀಡಿರುವುದರಿಂದ ಮುನಿರತ್ನ ವಿರುದ್ಧ ದೂರು ದಾಖಲಾಗಿತ್ತು.

