ಬೆಂಗಳೂರು: ಮುಜರಾಯಿ ಇಲಾಖೆಯ ಎಲ್ಲ ದೇವಸ್ಥಾನಗಳಲ್ಲಿ ಪ್ರಸಾದ ತಯಾರಿಸಲು ನಂದಿನಿ ತುಪ್ಪವನ್ನಷ್ಟೇ ಬಳಕೆ ಮಾಡುವಂತೆ ರಾಜ್ಯ ಸರಕಾರ ಆದೇಶ ನೀಡಿದೆ.
ಈ ಕುರಿತು ಧಾರ್ಮಿಕ ಧತ್ತಿ ಇಲಾಖೆಯ ಆಯುಕ್ತರು ಆದೇಶ ಮಾಡಿದ್ದು, ರಾಜ್ಯದ ಎಲ್ಲ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಸೇವೆಗಳನ್ನು ನಡೆಸಲು ಮತ್ತು ಪ್ರಸಾದ ತಯಾರಿಸುವುದಲ್ಲಿ ನಂದಿನಜ ತಪ್ಪವನ್ನಷ್ಟೇ ಬಳಕೆ ಮಾಡಬೇಕು ಎಂದು ಆದೇಶಿಸಲಾಗಿದೆ.
ದೇವಸ್ಥಾನಗಳಲ್ಲಿ ದೀಪಗಳಿಗೆ, ವಿವಿಧ ಪ್ರಸಾದ ತಯಾರಿಕೆಗೆ ಹಾಗೂ ದಾಸೋಹ ಭವನಗಳಲ್ಲಿ ನಂದಿನಿ ತುಪ್ಪವನ್ನಷ್ಟೇ ಬಳಕೆ ಮಾಡಬೇಕು. ಜತೆಗೆ ಪ್ರಸಾದ ತಯಾರಿಕೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಕೆಎಂಎಫ್ ಇತ್ತೀಚಿಗೆ ತಿರುಪತಿ ಲಡ್ಡು ತಯಾರಿಕೆಗೆ ತುಪ್ಪ ಸರಬರಾಜು ಮಾಡುವ ಒಪ್ಪಂದವನ್ನು ಮರು ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ರೈತರ ಹಿತದೃಷ್ಟಿಯಿಂದ ರಾಜ್ಯದಲ್ಲಿ ಎಲ್ಲ ದೇವಸ್ಥಾನಗಳಲ್ಲಿ ನಂದಿನಿ ತುಪ್ಪ ಬಳಕೆ ಮಾಡಲು ತೀರ್ಮಾನಿಸಿದೆ.
ಈ ಸಂಬಂಧ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್, ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಸಚಿವ ರಾಮಲಿಂಗಾ ರೆಡ್ಡಿ ನಂದಿನಿ ತುಪ್ಪ ಬಳಕೆಗೆ ಸೂಚನೆ ನೀಡಿದ್ದರ ಹಿನ್ನೆಲೆಯಲ್ಲಿ ಇಲಾಖೆ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಎ ಕೆಟಗರಿಯ 201, ಬಿ ಕೆಟಗರಿಯ 139 ಹಾಗೂ ಸಿ ಕೆಟಗರಿಯ 34,223 ಸೇರಿ 43583 ದೇವಸ್ಥಾನಗಳಲ್ಲಿ ನಂದಿನಿ ತುಪ್ಪವನ್ನಷ್ಟೇ ಬಳಕೆ ಮಾಡಬೇಕು ಎಂದು ಹೊರಡಿಸಿರುವ ಆದೇಶದಿಂದ ರಾಜ್ಯದ ರೈತರಿಗೆ ಅನುಕೂಲವಾಗಲಿದೆ.