ಹೊಸದಿಲ್ಲಿ: ಕೊಕ್ಕರೆಗಳು ತಮ್ಮ ಆಹಾರ ಮತ್ತು ಸಂತಾನೋತ್ಪತ್ತಿಗಾಗಿ ವಲಸೆ ಹೋಗುವುದು ಸಹಜ. ಆದರೆ, ಇಲ್ಲೊಂದು ವಿಶೇಷ ತಳಿಯ ಸೈಬೀರಿಯನ್ ಕೊಕ್ಕರೆ 3676 ಕಿ.ಮೀ. ದೂರ ಕ್ರಮಿಸುವ ಮೂಲಕ ದಾಖಲೆ ನಿರ್ಮಿಸಿದೆ.
ರಷ್ಯಾದ ದಕ್ಷಿಣ ಮಧ್ಯ ಸೈಬೀರಿಯಾದಿಂದ ಈ ಕೊಕ್ಕರೆ ಹಾರಾಟ ಆರಂಭಿಸಿದೆ ಎನ್ನಲಾಗಿದೆ. ಮಂಗೋಲಿಯಾದ ಗಡಿಯಲ್ಲಿರುವ ಈ ಈ ಪ್ರದೇಶದಿಂದ ಕೊಕ್ಕರೆಯು ಕಜಕಿಸ್ತಾನ, ಆಫ್ಘಾನಿಸ್ತಾನ, ಪಾಕಿಸ್ತಾನದ ಗಡಿಗಳನ್ನು ದಾಟಿ ಜೆಸ್ಮರೇನ್ ಮೂಲಕ ರಾಜಸ್ಥಾನದ ಫಲೋಡಿ ಜಿಲ್ಲೆಯ ಖಿಚಾನ್ ಪ್ರದೇಶಕ್ಕೆ ಬಂದು ತಲುಪಿದೆ.
ಸುಕ್ಪಾಪ್ ಎಂಬ ಅಡ್ಡ ಹೆಸರಿನಿಂದ ಕರೆಯಲ್ಪಡುವ ಈ ಕೊಕ್ಕರೆಯನ್ನು ಜು.20, 2024 ರಲ್ಲಿ ಸೈಬೀರಿಯಾದಲ್ಲಿ ಟ್ಯಾಗ್ ಮಾಡಲಾಗಿತ್ತು. ಇದು ಎರಡು ಮರಿಗಳಿದ್ದ ಕೊಕ್ಕರೆ ಕುಟುಂಬದ ಹಿರಿಯ ಗಂಡು ಕೊಕ್ಕರೆಯಾಗಿತ್ತು ಎಂದು ಸೈಬೀರಿಯಾದ ಕೊಕ್ಕರೆ ಸಂಶೋದಕ ಎಲೆನಾ ಮುದ್ರಿಕ್ ಸ್ಪಷ್ಟಪಡಿಸಿದ್ದಾರೆ.
ಖಿಚಾನ್ ಪ್ರದೇಶದಲ್ಲಿ ಆಸ್ಟ್ರೇಲಿಯಾದ ಫೋಟೋ ಪ್ರವಾಸಿಗರೊಬ್ಬರು ಕ್ಲಿಕ್ಕಿಸಿದ ಫೋಟೋವೊಂದರ ಮೂಲಕ ಸುಕ್ಪಾಕ್ ಭಾರತ ತಲುಪಿರುವುದು ದೃಢವಾಗಿದೆ. ಇದರ ವಲಸೆಯನ್ನು ಗುರುತಿಸುವ ಸಲುವಾಗಿಯೇ ಟ್ಯಾಗ್ ಮಾಡಲಾಗಿದ್ದು, ಅದರ ಟ್ಯಾಗ್ ಆಧಾರದ ಮೇಲೆ ಕೊಕ್ಕರೆ 3,676 ಕಿ.ಮೀ ಕ್ರಮಿಸಿರುವುದನ್ನು ಪತ್ತೆ ಮಾಡಲಾಗಿದೆ.
ಈ ಹಿಂದೆ ಮಂಗೋಲಿಯಾದ ಪಕ್ಷಿಯೊಂದು 2800 ಕಿ.ಮೀ. ದೂರವನ್ನು ಕ್ರಮಿಸಿದ್ದು ಈವರೆಗಿನ ದಾಖಲೆಯಾಗಿದೆ. ಸಾಮಾನ್ಯವಾಗಿ ಈ ಪಕ್ಷಿಗಳು ನೇಪಾಳದ ಹಿಮಾಲಯ ಶ್ರೇಣಿಗಳನ್ನು ದಾಟಿ ಭಾರತ ತಲುಪುತ್ತವೆ. ಆದರೆ, ಸುಕ್ಪಾಕ್ ಭಾರತ ಪ್ರವೇಶಿಸಲು ಪಾಕಿಸ್ತಾನದ ಹಾದಿ ಹಾಯ್ದುಕೊಂಡಿದ್ದು ಕುತೂಹಲ ಮೂಡಿಸಿದೆ.
ರಾಜಸ್ಥಾನದ ಖಿಚಾನ್ ಪ್ರದೇಶವು ವಲಸೆ ಕೊಕ್ಕರೆಗಳ ನೆಚ್ಚಿನ ಚಳಿಗಾಲದ ತಾಣವಾಗಿದೆ. ಇಲ್ಲಿ ಸುಮಾರು 20 ಸಾವಿರ ಪಕ್ಷಿಗಳು ಬೀಡುಬಿಟ್ಟಿವೆ. ತಮ್ಮ ಸಂತಾನೋತ್ಪತ್ತಿ ಹಾಗೂ ಚಳಿಗಾಲದ ದಿನಗಳಿಗಾಗಿ ಲಕ್ಷಾಂತರ ಪಕ್ಷಿಗಳು ಹೀಗೆ ಪ್ರಯಾಣ ಬೆಳಸುತ್ತವೆ. ಇದೀಗ ಸುಕ್ಪಾಕ್ ಅತಿ ಹೆಚ್ಚು ದೂರ ಪ್ರಯಾಣ ಬೆಳೆಸಿ ದಾಖಲೆ ನಿರ್ಮಿಸಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
