ಬೆಂಗಳೂರು:ನಗರದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ರಸ್ತೆ ರಾಬರಿ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇವುಗಳ ಕಡಿವಾಣಕ್ಕೆ ಸಂಚಾರ ಪೊಲೀಸರು ಕಠಿಣ ಕ್ರಮಗಳಿಗೆ ಮುಂದಾಗಿದ್ದಾರೆ.
ಪ್ರತಿ ಪೊಲೀಸ್ ಠಾಣೆಗೆ ಇಬ್ಬರು ಮಹಿಳಾ ಸಿಬ್ಬಂದಿಯನ್ನು ನೇಮಕ ಮಾಡುವ ಮೂಲಕ ಮಹಿಳೆಯರ ಸುರಕ್ಷತೆಗೆ ಆಧ್ಯತೆ ನೀಡಲಾಗುತ್ತದೆ ಎಂದು ಬೆಂಗಳೂರು ನಗರ ಸಂಚಾರ ವಿಭಾಗದ ಎಡಿಜಿಪಿ ಅನುಚೇತ್ ತಿಳಿಸಿದ್ದಾರೆ.
ಇಬ್ಬರು ಮಹಿಳಾ ಸಿಬ್ಬಂದಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲಿದ್ದು, ಒಬ್ಬರು ಹೆಡ್ ಕಾನ್ ಸ್ಟೇಬಲ್ ಮತ್ತೊಬ್ಬರು ಕಾನ್ಸ್ ಟೇಬಲ್ ಇರಲಿದ್ದಾರೆ. ಒಬ್ಬರು ಠಾಣೆಯಲ್ಲಿ ಕೆಲಸ ಮಾಡಿದರೆ, ಮತ್ತೊಬ್ಬರು ರೌಂಡ್ಸ್ ನಲ್ಲಿ ಪುರುಷ ಪೊಲೀಸರ ಜತೆಗೆ ಕಾರ್ಯನಿರ್ವಹಿಸಲಿದ್ದಾರೆ ಎಂದು ಹೇಳಿದ್ದಾರೆ.
ನಗರದ 50 ಸಂಚಾರಿ ಪೊಲೀಸ್ ಠಾಣೆಗಳಲ್ಲಿಯೂ ಮಹಿಳಾ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಿದ್ದು, ಅಪಘಾತ ಮತ್ತು ಅತ್ಯಾಚಾರ ದಂತಹ ಘಟನೆಗಳ ತಡೆಗೆ ಡ್ರಂಕ್ ಆ್ಯಂಡ್ ಡ್ರೈವ್ ತಪಾಸಣೆ ಆರಂಭಿಸಲು ಸೂಚಿಸಲಾಗಿದೆ. ರಾತ್ರಿ ವೇಳೆ ನಡೆಯುತ್ತಿರುವ ಗಲಭೆ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಮದ್ಯ ಸೇವನೆಯೇ ಪ್ರಮುಖ ಕಾರಣವಾಗಿದ್ದು, ತಪಾಸಣೆ ಮೂಲಕ ಇಂತಹ ಘಟನೆಗಳಿಗೆ ಕಡಿವಾಣ ಹಾಕಬಹುದು ಎಂದು ಅನುಚೇತ್ ತಿಳಿಸಿದ್ದಾರೆ.