ಅನಕಪಲ್ಲಿ(ಆಂಧ್ರ ಪ್ರದೇಶ): ಫಾರ್ಮಾ ಕಂಪನಿಯೊಂದರಲ್ಲಿ ರಿಯಾಕ್ಟರ್ ಸ್ಫೋಟಗೊಂಡು 18 ಮಂದಿ ಸಾವನ್ನಪ್ಪಿದ್ದು. 50 ಮಂದಿ ಗಾಯಗೊಂಡಿರುವ ಘಟನೆ ಆಂಧ್ರಪ್ರದೇಶದ ಅನಕಪಲ್ಲಿ ಜಿಲ್ಲೆಯ ರಾಂಬಿಲ್ಲಿ ಮಂಡಲದ ಅಚ್ಯುತಪುರಂನಲ್ಲಿ ನಡೆದಿದೆ.
ಇಲ್ಲಿನ ಎಸ್ಸೆಂಟಿಯಾ ಎಂಬ ಕಂಪನಿಯಲ್ಲಿ ಮಧ್ಯಾಹ್ನದ ಊಟದ ವಿರಾಮದ ವೇಳೆ ರಿಯಾಕ್ಟರ್ ಸ್ಫೋಟಗೊಂಡು, ಬೆಂಕಿ ಹೊತ್ತಿಕೊಂಡಿದೆ. ಕಂಪನಿ ಆವರಣದಲ್ಲಿ ದಟ್ಟ ಹೊಗೆ ಆವರಿಸಿಕೊಂಡಿದೆ. ದೊಡ್ಡ ಸದ್ದು ಕೇಳಿ ವಿರಾಮದಲ್ಲಿದ್ದ ಕಾರ್ಮಿಕರು ಬೆಚ್ಚಿ ಬಿದ್ದಿದ್ದಾರೆ. ಕೆಲವರು ಕಂಪನಿ ಒಳಗಿನಿಂದ ಕಿರುಚುತ್ತಾ ಓಡಿಬಂದರು. ರಿಯಾಕ್ಟರ್ ಸ್ಫೋಟದ ಸಮಯದಲ್ಲಿ 300 ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ರಿಯಾಕ್ಟರ್ ಸ್ಫೋಟದ ರಭಸಕ್ಕೆ ಮೊದಲ ಮಹಡಿಯ ಸ್ಲ್ಯಾಬ್ ಕುಸಿದಿದೆ. ಇದರಿಂದ ಅನೇಕ ಕಾರ್ಮಿಕರ ದೇಹಗಳು ಛಿದ್ರವಾಗಿವೆ. ಐವರ ಮೃತದೇಹಗಳನ್ನು ಅನಕಾಪಲ್ಲಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಹೊಗೆ ಮತ್ತು ಬೆಂಕಿ ಆವರಿಸಿಕೊಂಡಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಗಾಯಗೊಂಡವರ ಪೈಕಿ ಐವರಿಗೆ ಶೇ.60ಕ್ಕೂ ಹೆಚ್ಚು ಸುಟ್ಟ ಗಾಯಗಳಾಗಿವೆ.
8 ಅಗ್ನಿಶಾಮಕ ವಾಹನಗಳು ಸ್ಫೋಟದ ಬೆಂಕಿ ನಂದಿಸುವ ಕಾರ್ಯ ನಡೆಸಿದ್ದು, ವಿಷಯ ತಿಳಿದ ಅಧಿಕಾರಿಗಳು ದುರಂತ ಸಂಭವಿಸಿದ ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ರಿಯಾಕ್ಟರ್ ಸ್ಫೋಟಗೊಳ್ಳಲು ಕಾರಣ ಏನೆಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಮತ್ತಷ್ಟು ಮೃತದೇಹಗಳನ್ನು ಗುರುತಿಸಿ ಹೊರತೆಗೆಯುವ ಕೆಲಸವನ್ನು ರಕ್ಷಣಾ ಸಿಬ್ಬಂದಿ ನಡೆಸಿದ್ದಾರೆ.