ಬೆಂಗಳೂರು: ರಸ್ತೆ ಗುಂಡಿಗಳನ್ನು ಮುಚ್ಚುವ ಸಲುವಾಗಿ ಬಿಡುಹಡೆಯಾಗಿರುವ 47 ಸಾವಿರ ಕೋಟಿ ಅನುದಾನದಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪ ಮಾಡಿ ದಾಖಲೆ ಬಿಡುಗಡೆ ಮಾಡಿಲು ಮುಂದಾಗಿದ್ದ ಎನ್.ಆರ್. ರಮೇಶ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಸ್ತುತ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಸೇರಿದಂತೆ 18 IAS ಅಧಿಕಾರಿಗಳು ಭ್ರಷ್ಟಾಚಾರದ ಲ್ಲಿ ಭಾಗಿಯಾಗಿದ್ದಾರೆ ಎಂದು ಎನ್.ಆರ್.ರಮೇಶ್ ಆರೋಪಿಸಿದ್ದರು. ಈ ಕುರಿತು ದಾಖಲೆ ಬಿಡುಗಡೆಗೆ ಸಜ್ಜಾಗಿ, ಬಿಬಿಎಂಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಲು ಮುಂದಾಗಿದ್ದರು. ಈ ವೇಳೆ ಅವರನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ.
ಬಂಧಿಸಿ, ಬಿಡುಗಡೆ ಮಾಡಿದ ನಂತರ ಮಾತನಾಡಿದ ಎನ್.ಆರ್.ರಮೇಶ್, ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ ವಿರುದ್ಧವೆಲ್ಲ ನಾನು ದಾಖಲೆ ಬಿಡುಗಡೆ ಮಾಡಿದ್ದೇನೆ. ಆದರೆ, ಆಗೆಲ್ಲ ಇಲ್ಲದ ಪೊಲೀಸರ ಪ್ರವೇಶ ಯಾಕೆ ಎಂಬುದನ್ನು ಆಯುಕ್ತರು ಹೇಳಬೇಕು ಎಂದು ಒತ್ತಾಯಿಸಿದರು.
ರಸ್ತೆ ಗುಂಡಿ ಮುಚ್ಚಲು ಸಾವಿರಾರು ಕೋಟಿ ಖರ್ಚು ಮಾಡಿದ್ದಾರೆ. ಆದರೆ, ಇಂದಿಗೂ ನಗರದಲ್ಲಿ ನಾವು ಸಲ್ಲಿಕೆ ಮಾಡಿರುವ ದಾಖಲೆಗಳಲ್ಲಿ 36 ಸಾವಿರ ರಸ್ತೆ ಗುಂಡಿಗಳಿವೆ. ಇದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಲೋಕಾಯುಕ್ತಕ್ಕೆ ನೀಡಿದ್ದೇನೆ. ಇದೇ ಭಯದಿಂದ ಅಧಿಕಾರಿಗಳು ನನ್ನ ವಾಕ್ ಸ್ವಾತಂತ್ರ್ಯ ಕ್ಕೆ ದಕ್ಕೆ ತಂದಿದ್ದಾರೆ ಎಂದು ತಿಳಿಸಿದರು.
4133 ಪುಟಗಳ ದಾಖಲೆಗಳನ್ನು ಮಾಧ್ಯಮದ ಮುಂದೆ ಬಿಡುಗಡೆ ಮಾಡಿರುವ ಎನ್.ಆರ್. ರಮೇಶ್, ನಗರದ ರಸ್ತೆ ಗುಂಡಿಗಳನ್ನು ಚಿತ್ರೀಕರಿಸಿದ ವಿಡಿಯೋ ಸಿಡಿಯನ್ನು ಲೋಕಾಯುಕ್ತಕ್ಕೆ ಸಲ್ಲಿಕೆ ಮಾಡಿದ್ದಾರೆ.