ಬೆಳಗಾವಿ: ಜಿಲ್ಲೆ ಕಿತ್ತೂರು ತಾಲೂಕಿನ ಇಟಗಿ ಕ್ರಾಸ್ ಬಳಿಯ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ- 4ರಲ್ಲಿ ಹೆದ್ದಾರಿ ಕೆಲಸ ಮಾಡುತ್ತಿದ್ದವರ ಮೇಲೆ ಟ್ಯಾಂಕರ್ ಹರಿದು ಮೂವರು ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ.,
ಘಟನೆಯಲ್ಲಿ ಆರು ಮಂದಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಹೆದ್ದಾರಿ ಗಸ್ತು ಸಿಬ್ಬಂದಿ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಹೆದ್ದಾರಿ ಕೆಲಸಕ್ಕಾಗಿ ಬಂದಿದ್ದ ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಶಿರೋಳಿ ಗ್ರಾಮದ ರಾಮಚಂದ್ರ ಜಾಧವ್ (45),ಅವರ ಪುತ್ರ ಮಹೇಶ್ ರಾಮಚಂದ್ರ ಜಾಧವ್ (18), ರಾಮಣ್ಣ (38) ಮೃತರು.
ಲಕ್ಷ್ಮೀಬಾಯಿ, ಅನುಶ್ರೀ, ಭೀಮವ್ವ ಎಂಬುವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳು ಭೀಮವ್ವ ಅವರ ಎರಡೂ ಕಾಲುಗಳು ತುಂಡಾಗಿವೆ.
ಕಾರ್ಮಿಕರು ಎನ್ಹೆಚ್ಎಐನಲ್ಲಿ ದಿನಗೂಲಿ ಕೆಲಸಕ್ಕಾಗಿ ಕಲಬುರಗಿಯ ಕಲಬುರಗಿಯ ಶಹಬಾದ್, ಸೇಡಂ, ಚಿಂಚೋಳಿಯಿಂದ ಬಂದಿದ್ದರು. ಭಾನುವಾರ ಬೆಳಿಗ್ಗೆ ಕೆಲಸ ಮಾಡುತ್ತಿದ್ದಾಗ ಆಯಿಲ್ ತುಂಬಿದ್ದ ಟ್ಯಾಂಕರ್ ಏಕಾಏಕಿ ಹರಿದು, ಸರ್ವಿಸ್ ರಸ್ತೆಯಲ್ಲಿ ಪಲ್ಟಿಯಾಗಿದೆ. ಟ್ಯಾಂಕರ್ನಲ್ಲಿ ಸಿಲುಕಿದ್ದ ಚಾಲಕನನ್ನು ಪೊಲೀಸರು ಹೊರ ತೆಗೆದಿದ್ದಾರೆ.
ಟ್ಯಾಂಕರ್ ಚಾಲಕ ದಿನೇಶ್ ಶೆಟ್ಟಿಗೂ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಿತ್ತೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳಕ್ಕೆ ಹೆಚ್ಚುವರಿ ಎಸ್‌ಪಿ ಆರ್.ಬಿ ಬಸರಗಿ ಕೂಡ ಭೇಟಿ ನೀಡಿ ಮಾಹಿತಿ ಪಡೆದರು. ಆಯಿಲ್ ಟ್ಯಾಂಕರ್ ಪಲ್ಟಿಯಾದ ಹಿನ್ನೆಲೆಯಲ್ಲಿ ಅಗ್ನಿಶಾಮಕ ಸಿಬ್ಬಂದಿ ಕೂಡ ಸ್ಥಳಕ್ಕೆ ಆಗಮಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಕ್ರೇನ್ ಮೂಲಕ ಟ್ಯಾಂಕರ್ ಮೇಲೆತ್ತಿದ್ದಾರೆ.