ಬೆಂಗಳೂರು: ಪದ್ಮನಾಭ ನಗರ ವಿಧಾನಸಭಾ ಕ್ಷೇತ್ರದ ಕುಮಾರಸ್ವಾಮಿ ಲೇಔಟ್ ವ್ಯಾಪ್ತಿಯಲ್ಲಿ ಬಿಜಿಎಸ್ ವೈದ್ಯಕೀಯ ಆಸ್ಪತ್ರೆ ಮತ್ತು ಸಂಸ್ಥೆ ಸಹಯೋಗದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್, ಸಚಿವ ರಾಮಲಿಂಗಾ ರೆಡ್ಡಿ ಮತ್ತು ಡಿ.ಕೆ ಸುರೇಶ್ ಮಾರ್ಗದರ್ಶನದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

ಈಗಿನ ಕಾಲದಲ್ಲಿ ಆರೋಗ್ಯದ ಮಹತ್ವ, ಆರೋಗ್ಯ ವಿಮೆ ಅಗತ್ಯ ಹಾಗೂ ರೋಗ ಮುಕ್ತ ಜೀವನದ ಬಗ್ಗೆ ಅರಿವು ಮೂಡಿಸಲಾಯಿತು. ಕುಮಾರಸ್ವಾಮಿ ಲೇಔಟ್ ವ್ಯಾಪ್ತಿಯಲ್ಲಿ ಆಯೋಜಿಸಿದ್ದ ಈ ಶಿಬಿರಕ್ಕೆ ಭರ್ಜರಿ ಜನ ಸ್ಪಂದನೆ ದೊರೆಯಿತು. ಕಾರ್ಯಕ್ರಮವನ್ನು ಪದ್ಮನಾಭ ನಗರ ವಿಧಾನಸಭಾ ಕ್ಷೇತ್ರದ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪ್ರಮೋದ್ ಶ್ರೀನಿವಾಸ್ ಆಯೋಜಿಸಿದ್ದರು.

ಪದ್ಮನಾಭ ನಗರ ವಿಧಾನಸಭಾ ಕ್ಷೇತ್ರದ ಹಿರಿಯ ಕಾಂಗ್ರೆಸ್ ಮುಖಂಡರಾದ ಎಲ್. ಶ್ರೀನಿವಾಸ್ ಕಾರ್ಯಕ್ರಮದ ಉದ್ಘಾಟನೆ ಮಾಡಿದರು. ಕಾರ್ಯಕ್ರಮದಲ್ಲಿ ಹಿರಿಯ ಮುಖಂಡರಾದ ಪ್ರಸಾದ್ ಬಾಬು, ಎಚ್. ಸುರೇಶ್, ಇವೆಂದ್ರನ್ ಬಾಬು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪವನ್ ಕುಮಾರ್ ಮತ್ತು ಅಕ್ಬರ್, ಹಿರಿಯ ಕಾರ್ಯಕರ್ತರು, ಮಹಿಳಾ ಕಾರ್ಯಕರ್ತರು ಭಾಗವಹಿಸಿದ್ದರು.
