ಬೆಂಗಳೂರು: ವಿಶ್ವವಾಣಿ ಕ್ರಿಕೆಟ್ ತಂಡ 2025ರ ಕರ್ನಾಟಕ ಮೀಡಿಯಾ ಚಾಂಪಿಯನ್ ಲೀಗ್ ಟೆನಿಸ್ ಬಾಲ್ ಕ್ರಿಕಟ್ ಟೂರ್ನಿಯನ್ನು (KMCL 2025) ಮೂರು ಗೆಲುವುಗಳ ಮೂಲಕ ಅಂತ್ಯಗೊಳಿಸಿದೆ.
ಡಿ ಗುಂಪಿನಲ್ಲಿ ಸ್ಥಾನ ಪಡೆದಿದ್ದ ವಿಶ್ವವಾಣಿ ತಂಡ ಲೀಗ್‌ನಲ್ಲಿ ಆಡಿದ 5 ಪಂದ್ಯಗಳ ಪೈಕಿ 3ರಲ್ಲಿ ಗೆಲುವು ಸಾಧಿಸಿತು. ಒಟ್ಟು 6 ಅಂಕಗಳನ್ನು ಕಲೆ ಹಾಕಿದರೂ ಡಿ ಪಾಯಿಂಟ್ಸ್ ಟೇಬಲ್‌ನಲ್ಲಿ 3ನೇ ಸ್ಥಾನ ಪಡೆದರೂ ಟೂರ್ನಿಯ ಸೂಪರ್-8ಕ್ಕೆ ಅರ್ಹತೆ ಪಡೆಯಲು ವಿಫಲವಾಯಿತು. ಆದರೂ ಮೂರು ಗೆಲುವುಗಳ ಮೂಲಕ, ಮುಂದಿನ ಟೂರ್ನಿಗೆ ವಿಶ್ವಾಸ ಹೆಚ್ಚಿಸಿಕೊಂಡಿದೆ.

ಗರ್ಭಕಂಠ ಕೋಶ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಹೈಪರ್ ಸ್ಪೋರ್ಟ್ಸ್ ಹಾಗೂ ವೆಲ್ಫೇರ್ ಅಸೋಸಿಯೇಷನ್ ಜಂಟಿ ಆತಿಥ್ಯದಲ್ಲಿ ನಡೆಯುತ್ತಿರುವ ಆರು ಓವರ್‌ಗಳ ಟೆನಿಸ್ ಬಾಲ್ ಟೂರ್ನಿಯಲ್ಲಿ ಒಟ್ಟು 24 ತಂಟಗಳು ನಾಲ್ಕು ಗುಂಪುಗಳ ಮೂಲಕ ಲೀಗ್ ಹಂತದಲ್ಲಿ ಕಾದಾಟ ನಡೆಸಿದ್ದವು.
ವಿಶ್ವವಾಣಿ ತಂಡ ಡಿ ಗುಂಪಿನಲ್ಲಿ ಸ್ಥಾನ ಪಡೆದಿತ್ತು. ಮಾ. 16 ರಂದು ಸೋಮವಾರ ವಿಶ್ವವಾಣಿ ತಂಡ, ತನ್ನ ಮೊದಲ ಪಂದ್ಯದಲ್ಲಿ ವಿಜಯವಾಣಿ ಎದುರು ಕಾದಾಟ ನಡೆಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ವಿಶ್ವವಾಣಿ, ರಮೇಶ್(29 ರನ್) ಅವರ ಬ್ಯಾಟಿಂಗ್ ಬಲದಿಂದ 6 ಓವರ್‌ಗಳಿಗೆ 5 ವಿಕೆಟ್ ನಷ್ಟಕ್ಕೆ 61 ರನ್ ಗಳಿಸಿತು. ಬಳಿಕ ಗುರಿ ಹಿಂಬಾಲಿಸಿದ ವಿಜಯವಾಣಿ, ಕೇವಲ 3 ಓವರ್‌ಗಳಿಗೆ ವಿಕೆಟ್ ನಷ್ಟವಿಲ್ಲದೆ 63 ರನ್ ಗಳಿಸಿ 10 ವಿಕೆಟ್ ಗೆಲುವು ಪಡೆಯಿತು.
ನಂತರ ನಡೆದಿದ್ದ ಅಶ್ವವೇಗ ವಿರುದ್ಧದ ತನ್ನ ಎರಡನೇ ಪಂದ್ಯದಲ್ಲಿ ವಿಶ್ವವಾಣಿ ತಂಡ, 8 ವಿಕೆಟ್‌ಗಳ ಗೆಲುವು ಪಡೆಯಿತು. ಈ ಮೊದಲು ಬ್ಯಾಟ್ ಮಾಡಿದ್ದ ಅಶ್ವವೇಗ 4 ವಿಕೆಟ್ ನಷ್ಟಕ್ಕೆ 62 ರನ್ ಗಳಿಸಿತು. ಬಳಿಕ ಗುರಿ ಹಿಂಬಾಲಿಸಿದ ವಿಶ್ವವಾಣಿ, ರಮೇಶ್ (29 ರನ್) ಬ್ಯಾಟಿಂಗ್ ಬಲದಿಂದ 5 ಓವರ್‌ಗಳಿಗೆ 2 ವಿಕೆಟ್ ನಷ್ಟಕ್ಕೆ 63 ರನ್ ಗಳಿಸಿ ಗೆದ್ದು ಬೀಗಿತು. ನಂತರ ನಡೆದ 3ನೇ ಪಂದ್ಯದಲ್ಲಿ ವಿಶ್ವವಾಣಿ , ಬ್ಯಾಟಿಂಗ್ ವೈಫಲ್ಯದಿಂದಾಗಿ ವಾರ್ತಾಭಾರತಿ ಎದುರು 9 ವಿಕೆಟ್‌ಗಳ ಸೋಲು ಅನುಭವಿಸಿತ್ತು.
ಮಾರ್ಚ್ 17 ರಂದು ನಡೆದಿದ್ದ ನಾಲ್ಕನೇ ಪಂದ್ಯದಲ್ಲಿ ವಿಶ್ವವಾಣಿ ತಂಡ, ಹೊಸದಿಂಗತ ಎದುರು 8 ವಿಕೆಟ್‌ಗಳ ಗೆಲುವು ಪಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಹೊಸ ದಿಗಂತ ತಂಡ, 5 ವಿಕೆಟ್ ನಷ್ಟಕ್ಕೆ 65 ರನ್ ಕಲೆ ಹಾಕಿತ್ತು. ಬಳಿಕ ಗುರಿಯನ್ನು ಹಿಂಬಾಲಿಸಿದ ವಿಶ್ವವಾಣಿ, ರವೀಂದ್ರ ( 30 ರನ್) ಅವರ ಬ್ಯಾಟಿಂಗ್ ಬಲದಿಂದ 2 ವಿಕೆಟ್ ನಷ್ಟಕ್ಕೆ 66 ರನ್ ಗಳಿಸಿ ಗೆದ್ದು ಬೀಗಿತು.
ನಂತರ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ವಿಶ್ವವಾಣಿ ತಂಡ, ಪ್ರೆಸ್ ಕ್ಲಬ್ ಬೆಂಗಳೂರು ವಿರುದ್ಧ 8 ವಿಕೆಟ್ ಗೆಲುವು ಪಡೆದಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಪ್ರೆಸ್ ಕ್ಲಬ್ ತಂಡ, ರವೀಂದ್ರ (11-3) ಹಾಗೂ ಕೃಷ್ಣ (13ಕ್ಕೆ 3 ) ಅವರ ಮಾರಕ ಬೌಲಿಂಗ್ ದಾಳಿಗೆ ನಲುಗಿ 7 ವಿಕೆಟ್ ನಷ್ಟಕ್ಕೆ 52 ರನ್‌ಗಳನ್ನು ಕಲೆ ಹಾಕಿತು. ಬಳಿಕ ಗುರಿ ಹಿಂಬಾಲಿಸಿದ ವಿಶ್ವವಾಣಿ, ರವೀಂದ್ರ ( 32* ರನ್) ಅವರ ಸ್ಪೋಟಕ ಬ್ಯಾಟಿಂಗ್ ಬಲದಿಂದ 2.4 ಓವರ್‌ಗಳಿಗೆ 2 ವಿಕೆಟ್ ನಷ್ಟಕ್ಕೆ 53 ರನ್ ಗಳಿಸಿ ಗೆದ್ದು ಬೀಗಿತು.

