ಬೆಂಗಳೂರು: ಪ್ರಯಾಣಿಕರನ್ನು ಸಾಗಿಸಲು ಅಥವಾ ಬಾಡಿಗೆಗೆ ಬೈಕ್ ಗಳನ್ನು ಬಳಕೆ ಮಾಡಬಹುದು ಎಂದು ಶಾಸನದಲ್ಲಿ ವ್ಯಾಖ್ಯಾನಿಸದೇ ಇರುವುದರಿಂದ ಮೋಟಾರು ಸೈಕಲ್‌ಗಳು ಸಾರಿಗೆ ವಾಹನಗಳನ್ನಾಗಿ ಪರಿಗಣಿಸಲಾಗುವುದಿಲ್ಲ ಎಂದು ಸರ್ಕಾರ ಹೈಕೋರ್ಟ್ಗೆ ವಿವರಿಸಿದೆ.
ಮೋಟಾರು ವಾಹನಗಳ ಕಾಯಿದೆ 1988ರ ಅನ್ವಯ ಮಾರ್ಗಸೂಚಿ ರಚನೆ ಮಾಡುವವರೆಗೂ ಬೈಕ್ಗಳನ್ನು ಟ್ಯಾಕ್ಸಿಗಳನ್ನಾಗಿ ಪರಿಗಣಿಸಲಾಗದು ಎಂದು ಏಕ ಸದಸ್ಯ ಪೀಠ ನೀಡಿದ ಆದೇಶವನ್ನು ಪ್ರಶ್ನಿಸಿ ಉಬರ್ ಇಂಡಿಯಾ, ರ್ಯಾಪಿಡೊ, ಓಲಾ, ಉಬರ್ ಸೇರಿ ಹಲವು ಅಗ್ರಿಗೇಟರ್ ಸಂಸ್ಥೆಗಳು ಸಲ್ಲಿಸಿರುವ ಮೇಲ್ಮನವಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರ ನೇತೃತ್ವದ ವಿಭಾಗೀಯಕ್ಕೆ ಸರ್ಕಾರ ಈ ಮಾಹಿತಿ ನೀಡಿದೆ.
ವಿಚಾರಣೆ ವೇಳೆ ಸರ್ಕಾರದ ಪರವಾಗಿ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ, ಮೋಟಾರು ಸೈಕಲ್ ವ್ಯಾಖ್ಯಾನದಲ್ಲಿ ಅದು ಪ್ರಯಾಣಿಕರನ್ನು ಸಾಗಿಸಲು ಇರುವ ವಾಹನ ಎಂದು ಹೇಳಿಲ್ಲ. ಮೋಟಾರು ವಾಹನಗಳ ಕಾಯಿದೆ ಅಥವಾ ನಿಯಮಗಳಲ್ಲೂ ಪ್ರಯಾಣಿಕರನ್ನು ಮೋಟಾರ್ ಸೈಕಲ್ ಹೊತ್ತೊಯ್ಯಬಹುದು ಎಂದು ಹೇಳಿಲ್ಲ. ಮೋಟಾರ್ ಸೈಕಲ್, ಮೋಟಾರ್ ಕ್ಯಾಬ್ ವ್ಯಾಖ್ಯಾನದ ಅಡಿ ಬರುವುದಿಲ್ಲ ಎಂದು ಪೀಠಕ್ಕೆ ತಿಳಿಸಿದರು.
ಮೋಟಾರ್ ಸೈಕಲ್, ಪ್ರಯಾಣಿಕರನ್ನು ಹೊತ್ತೊಯ್ಯುವ ವಾಹನವಲ್ಲ, ಇದನ್ನು ಬಾಡಿಗೆ ಅಥವಾ ಹಣ ಸಂಪಾದಿಸಲು ಬಳಕೆ ಮಾಡಲಾಗದು. ಅನುಮತಿ ನೀಡುವುದು ರಾಜ್ಯ ಸರ್ಕಾರದ ವಿಶೇಷ ಅಧಿಕಾರವಾಗಿದೆ. ಮೋಟಾರ್ ಸೈಕಲ್‌ಗಳನ್ನು ವಾಣಿಜ್ಯ ಸಾರಿಗೆಗೆ ಬಳಕೆ ಮಾಡುವುದು ಮತ್ತು ಆ ಅನುಮತಿಯನ್ನು ನಿಯಂತ್ರಣ ಮಾರ್ಗಸೂಚಿಗಳ ಗೈರಿನಲ್ಲಿ ಅಂತಹ ಸೇವೆಯನ್ನು ಮುಂದುವರೆಸಲಾಗದು. ದೇಶದ 18 ರಾಜ್ಯಗಳಲ್ಲಿ ನಿರ್ದಿಷ್ಟವಾಗಿ ರಾಜ್ಯಗಳು ನಿಯಂತ್ರಣ ಮಾರ್ಗಸೂಚಿ ರೂಪಿಸಿದ ಮೇಲೆ ಬೈಕ್ ಟ್ಯಾಕ್ಸಿಗಳು ಸೇವೆ ನೀಡುತ್ತಿವೆ. ಈ ಸಂಸ್ಥೆಗಳು(ಅಗ್ರಿಗ್ರೇಟರ್ಗಳು) ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯಲ್ಲಿ ವಾದಿಸುವುದಕ್ಕೆ ಅವಕಾಶವಿಲ್ಲ ಎಂದು ಪೀಠಕ್ಕೆ ವಿವರಿಸಿದರು.
ಅಲ್ಲದೇ, ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಕರನ್ನು ಸೇವೆ ಕಲ್ಪಿಸುವ ವಿಚಾರದಲ್ಲಿ ಸರ್ಕಾರ ನಿಷೇಧದ ಅಂಶವನ್ನು ಹೊಂದಿಲ್ಲ. ಅದಕ್ಕೆ ಬದಲಾಗಿ ನಿಯಂತ್ರಣ ಮಾಡುವುದಕ್ಕೆ ಮುಂದಾಗಿದೆ. ಈ ಅಂಶ ಸಾರ್ವಜನಿಕ ಹಿತಾಸಕ್ತಿಯ ವಿಷಯವಾಗಿದೆ. ಮುಂಬೈನ ಕೆಲವು ಕಡೆ ಆಟೊ ಓಡಾಟವನ್ನೇ ನಿಷೇಧಿಸಲಾಗಿದೆ. ಕೆಲವು ಅಗ್ರಿಗೇಟರ್‌ಗಳು ನಿಷೇಧದ ನಡುವೆಯೂ ಬೈಕ್ ಟ್ಯಾಕ್ಸಿ ಸೇವೆ ಮುಂದುವರಿಸುವ ಮೂಲಕ ನ್ಯಾಯಾಲಯದ ಆದೇಶ ಉಲ್ಲಂಘಿಸುತ್ತಿದ್ದಾರೆ. ಅಗ್ರಿಗೇಟರ್‌ಗಳು ಪರವಾನಗಿಗೆ ಮನವಿ ಸಲ್ಲಿಸಬಹುದು. ರಾಜ್ಯ ಸರ್ಕಾರವು ತನ್ನದೇ ಮಾರ್ಗಸೂಚಿ ರೂಪಿಸಬಹುದು ಅಥವಾ ಕೇಂದ್ರ ಸರ್ಕಾರದ ನಿಯಮಗಳನ್ನೇ ಪಾಲಿಸಬಹುದು ಎಂದು ಪೀಠಕ್ಕೆ ತಿಳಿಸಿದರು.
ಮೇಲ್ಮನವಿದಾರರ ಪರ ವಕೀಲರು, ಅಗ್ರಿಗ್ರೆಟರ್ ಕಂಪನಿಗಳು ಹಳದಿ ಬೋರ್ಡ್ ನೋಂದಣಿಗೆ ಸಿದ್ಧತೆ ನಡೆಸಿದ್ದು, ಪರವಾನಗಿ ಪಡೆಯಲು ಮುಂದಾಗಿವೆ ಎಂದು ತಿಳಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಪೀಠ, ಬೈಕ್ ಟ್ಯಾಕ್ಸಿ ಪರವಾನಗಿಯನ್ನೂ ನೀಡಿಲ್ಲ. ಮಾರ್ಗಸೂಚಿಯನ್ನೂ ರೂಪಿಸಿಲ್ಲ. ಇದರ ಅರ್ಥ ಸಂಪೂರ್ಣ ನಿಷೇಧದಂತೆ ಎಂದು ತಿಳಿಸಿದರು. ಇದಕ್ಕೆ ಶೆಟ್ಟಿ, ಹಲವಾರು ಕಾರಣಗಳನ್ನು ಪರಿಗಣಿಸಿ ಈ ನಿರ್ಧಾರ ಮಾಡಿದೆ ಎಂದು ಸಮರ್ಥನೆ ಮಾಡಿಕೊಂಡಿದ್ದರು.
ಬೈಕ್ ಟ್ಯಾಕ್ಸಿ ನಿಷೇಧಕ್ಕೆ ಮಾಲಿನ್ಯ ಒಂದು ಕಾರಣ ಎಂದು ಸರ್ಕಾರ ಹೇಳಿದೆ. ಆದರೆ, ಇ-ಬೈಕ್‌ಗಳಿಗೂ ಅನುಮತಿ ನೀಡಿಲ್ಲ. ಸುರಕ್ಷತೆ ಕಾರಣಗಳಿಗೆ ಏನಾದರೂ ದಾಖಲೆ ಇದೆಯೇ ಎಂದು ಸರ್ಕಾರವನ್ನು ಪೀಠ ಪ್ರಶ್ನಿಸಿತು. ಇದಕ್ಕೆ ಈ ಸಂಬಂಧ ಸರ್ಕಾರ ರಚನೆ ಮಾಡಿದ್ದ ಸಮಿತಿಯ ವರದಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿ ತಮ್ಮ ವಾದ ಪೂರ್ಣಗೊಳಿಸಿದರು. ವಾದ ಆಲಿಸಿದ ಪೀಠ ವಿಚಾರಣೆಯನ್ನು ನವೆಂಬರ್ 24 ಕ್ಕೆ ಮುಂದೂಡಿತು.
