ಶೀಘ್ರದಲ್ಲೇ ಮಹಿಳಾ ಪ್ರಯಾಣಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಿಸುವ ಪ್ರಕ್ರಿಯೆ
ಬೆಂಗಳೂರು: ಶಕ್ತಿ ಯೋಜನೆಗೆ ವ್ಯಾಪಕ ಸ್ಪಂದನೆ ಸಿಗುತ್ತಿದ್ದು, ಇದುವರೆಗೆ 323 ಕೋಟಿ ಮಹಿಳೆಯರು ಪ್ರಯಾಣ ಮಾಡಿದ್ದು ಇದುವರೆಗೆ ಉಚಿತ ಟಿಕೆಟ್ ದರದ ಮೌಲ್ಯವೇ ಬರೋಬ್ಬರಿ 7823 ಕೋಟಿ ರೂಗಳಿಗೆ ಅಧಿಕವಾಗಿದೆ. ಈ ನಡುವೆ ಮಹಿಳಾ ಪ್ರಯಾಣಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಿಸುವ ಪ್ರಕ್ರಿಯೆ ಶೀಘ್ರವೇ ಜಾರಿಯಾಗಲಿದೆ.
2023ರ ಜೂನ್ 11ರಂದು ಆರಂಭವಾದ ಶಕ್ತಿ ಯೋಜನೆಗೆ ಭಾರಿ ಸ್ಪಂದನೆ ಸಿಗುತ್ತಿದೆ. ನ.6ರಂದು ಒಂದೇ ದಿನ ನಾಲ್ಕೂ ಸಾರಿಗೆ ನಿಗಮಗಳಿಂದ ಒಟ್ಟು 72.83 ಲಕ್ಷ ಮಹಿಳೆಯರು ಪ್ರಯಾಣಿಸಿದ್ದಾರೆ. ಇವರಿಗೆ ವಿತರಿಸಿರುವ ಉಚಿತ ಟಿಕೆಟ್ ಮೌಲ್ಯ 17.26 ಕೋಟಿ ರೂ ದಾಟಿದೆ. ಈ ಪೈಕಿ ಕೆಎಸ್‌ಆರ್‌ಟಿಸಿಯಲ್ಲಿ 22.24 ಲಕ್ಷ ಮಹಿಳೆಯರು ಪ್ರಯಾಣಿಸಿದ್ದು ಟಿಕೆಟ್ ಮೌಲ್ಯ 7.47 ಕೋಟಿಯಷ್ಟಾಗಿದೆ. ಬಿಎಂಟಿಸಿಯಲ್ಲಿ 23.82 ಲಕ್ಷ ಮಂದಿ ಸ್ತ್ರೀಯರು ಸಂಚರಿಸಿದ್ದು ಟಿಕೆಟ್ ಮೌಲ್ಯ 3.09 ಕೋಟಿ ರೂಗಳಾಗಿದೆ. ಇನ್ನು ವಾಯುವ್ಯ ಸಾರಿಗೆ ನಿಗಮದಲ್ಲಿ 16.67 ಲಕ್ಷ ಮಹಿಳೆಯರು ಪ್ರಯಾಣ ಬೆಳೆಸಿದ್ದು ಒಟ್ಟು 4.21 ಕೋಟಿ ರೂ ಉಚಿತ ಟಿಕೆಟ್ ನೀಡಲಾಗಿದೆ. ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದಲ್ಲಿ 10.09 ಲಕ್ಷ ಮಂದಿ ಪ್ರಯಾಣಿಸಿದ್ದು ಇದರ ಟಿಕೆಟ್ ಮೌಲ್ಯ 3.38 ಕೋಟಿ ರೂಗಳಿಗೂ ಹೆಚ್ಚಾಗಿದೆ.
ಕೆಎಸ್‌ಆರ್‌ಟಿಸಿ 100 ಕೋಟಿ ಸನಿಹ: ಶಕ್ತಿ ಯೋಜನೆ ಆರಂಭವಾದಲ್ಲಿಂದ ಈವರೆಗೆ ಸಾರಿಗೆ ನಿಗಮದ ಬಸ್‌ಗಳಲ್ಲಿ ಒಟ್ಟು 556.67 ಕೋಟಿ ಪ್ರಯಾಣಿಕರು ಸಂಚರಿಸಿದ್ದು ಇದರಲ್ಲಿ ಉಚಿತ ಪ್ರಯಾಣದ ಸೌಲಭ್ಯ ಪಡೆದಿರುವ ಮಹಿಳೆಯರ ಸಂಖ್ಯೆ ಬರೋಬ್ಬರಿ 323.53 ಕೋಟಿಗಳಷ್ಟಾಗಿದೆ. ಇದರಲ್ಲಿ ಕೆಎಸ್‌ಆರ್‌ಟಿಸಿ ಒಂದರಲ್ಲಿಯೇ 168.40 ಕೋಟಿ ಪ್ರಯಾಣಿಸಿದ್ದು ಇದರಲ್ಲಿ 97.77 ಕೋಟಿಯಷ್ಟು ಮಹಿಳಾ ಪ್ರಯಾಣಿಕರೇ ಸೇರಿದ್ದಾರೆ. ಇದಕ್ಕೆ ಆಗಿರುವ ಉಚಿತ ಟಿಕೆಟ್ ಮೌಲ್ಯ 2950 ಕೋಟಿ ರೂ ದಾಟಿದೆ. ಇನ್ನು ಬಿಎಂಟಿಸಿಯಲ್ಲಿ ಸಂಚರಿಸಿರುವ 177.63 ಕೋಟಿ ಪ್ರಯಾಣಿಕರಲ್ಲಿ 103.16 ಕೋಟಿ ಮಹಿಳೆಯರಾಗಿದ್ದಾರೆ. ಇದಕ್ಕೆ ಸರ್ಕಾರ ಮಾಡಿರುವ ವೆಚ್ಚ 1352.26 ಕೋಟಿ ರೂಗಳಾಗಿವೆ.
16 ತಿಂಗಳೂ ಸತತ ಸ್ಪಂದನೆ ವಾಯುವ್ಯ ಸಾರಿಗೆ ನಿಗಮದ ಬಸ್‌ಗಳಲ್ಲಿ ಈವರೆಗೆ 123.62 ಕೋಟಿ ಮಂದಿ ಪ್ರಯಾಣಿಸಿದ್ದು, 75.03 ಕೋಟಿ ಮಹಿಳೆಯರು ಸೇರಿದ್ದಾರೆ. ಇವರಿಗೆ ವಿತರಿಸಿರುವ ಉಚಿತ ಟಿಕೆಟ್ ಮೌಲ್ಯ 1927.72 ಕೋಟಿ ರೂಗಳಾಗಿದೆ. ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದಲ್ಲಿ ಒಟ್ಟು 87.01 ಕೋಟಿ ಪ್ರಯಾಣಿಕರ ಪೈಕಿ 47.55 ಕೋಟಿ ಮಹಿಳೆಯರು ಸೇರಿದ್ದಾರೆ. ಇವರಿಗೆ ವಿತರಿಸಿರುವ ಉಚಿತ ಟಿಕೆಟ್ ಮೌಲ್ಯ 1593.02 ಕೋಟಿ ರೂಗಳಾಗಿದೆ. ನಾಲ್ಕೂ ನಿಗಮಗಳಿಂದ ಕಳೆದ 16 ತಿಂಗಳುಗಳಿಂದಲೂ ನಿರಂತರವಾಗಿ ಮಹಿಳಾ ಪ್ರಯಾಣಿಕರ ಸಂಖ್ಯೆ ನಿತ್ಯವೂ ಸರಾಸರಿ 60 ರಿಂದ 70 ಲಕ್ಷಕ್ಕೂ ಅಧಿಕ ಪ್ರಮಾಣದಲ್ಲಿ ದಾಖಲಾಗಿದೆ. ಏತನ್ಮಧ್ಯೆ ಸಾರಿಗೆ ನಿಗಮಗಳು ಉಚಿತ ಪ್ರಯಾಣಕ್ಕೆ ಸ್ಟಾರ್ಟ್ ಕಾರ್ಡ್ ವಿತರಿಸುವ ಪ್ರಕ್ರಿಯೆಯನ್ನು ಶೀಘ್ರವೇ ಆರಂಭಿಸಲಿದೆ ಎಂದು ಸಂಸ್ಥೆ ಮೂಲಗಳು ತಿಳಿಸಿವೆ.
20 ವೋಲ್ಲೋ ಬಸ್ ಶೀಘ್ರ ಸೇರ್ಪಡೆ: ದೇಶದಲ್ಲಿಯೇ ಅತ್ಯುನ್ನತ ಸಾರ್ವಜನಿಕ ಸಂಚಾರ ವ್ಯವಸ್ಥೆ ಹೊಂದಿರುವ ಕರ್ನಾಟಕದಲ್ಲಿ ಅತ್ಯಾಧುನಿಕ ವ್ಯವಸ್ಥೆ ಅಳವಡಿಕೆಯಲ್ಲಿಯೂ ಸಾರಿಗೆ ನಿಗಮಗಳು ಮುಂಚೂಣಿಯಲ್ಲಿವೆ. ಇತ್ತೀಚೆಗಷ್ಟೇ ತಲಾ 1.78 ಕೋಟಿ ರೂ ಮೌಲ್ಯದ 20 ಐರಾವತ ಕ್ಲಬ್ ಕ್ಲಾಸ್ ಬಸ್‌ಗಳನ್ನು ಸಂಸ್ಥೆಗೆ ಸೇರ್ಪಡೆ ಮಾಡಿಕೊಳ್ಳಲಾಗಿದ್ದು, ಪ್ರಯಾಣಿಕರಿಂದ ಉತ್ತಮ ಬೇಡಿಕೆ ಬರುತ್ತಿದೆ. ಮುಂದಿನ ಒಂದೆರಡು ತಿಂಗಳಲ್ಲಿ ಮತ್ತೆ 20 ಸಂಪೂರ್ಣ ಹವಚಾನಿಯಂತ್ರಿತ ವೋಲ್ಲೋ ಬಸ್‌ಗಳು ಸಂಸ್ಥೆಗೆ ಸೇರಲಿದೆ. ಪ್ರಮುಖವಾಗಿ ಬೆಂಗಳೂರಿನಿಂದ ಹೊರರಾಜ್ಯವಲ್ಲದೆ, ದೂರದ ಶಿವಮೊಗ್ಗ, ಮಂಗಳೂರು, ಬೆಳಗಾವಿ. ರಾಯಚೂರು, ಕಲಬುರಗಿ ಪ್ರದೇಶಗಳಿಗೆ ಹೆಚ್ಚುವರಿ ವೋಲ್ಲೋ ಬಸ್‌ಗಳ ಬೇಡಿಕೆ ಕೇಳಿ ಬಂದಿದೆ. ದೇಶದಲ್ಲೇ ಅತಿಹೆಚ್ಚು ಅತ್ಯಾಧುನಿಕ ಬಸ್‌ಗಳನ್ನು ಹೊಂದಿರುವ ಕೆಎಸ್‌ಆರ್‌ಟಿಸಿ ಪ್ರಯಾಣಿಕರ ಅಗತ್ಯತೆಗಳಿಗೆ ಮೊದಲ ಆದ್ಯತೆ ನೀಡಲಿದೆ. ತ್ವರಿತ ಸೇವೆ ಜೊತೆಗೆ ಸುರಕ್ಷಿತ ಪ್ರಯಾಣಕ್ಕೂ ಯೋಜಿಸಲಾಗಿದೆ.
ಮೊದಲಿಗೆ ಶಕ್ತಿ ಯೋಜನೆ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎನ್ನುವುದನ್ನು ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ. ದೇಶದಲ್ಲೇ ಅತ್ಯಂತ ಪ್ರತಿಷ್ಠಿತ ಎಂದು ಪರಿಗಣಿಸಲ್ಪಟ್ಟಿರುವ ಕೆಎಎಸ್‌ಆರ್‌ಟಿಸಿ ಶೀಘ್ರವೇ ಇನ್ನಷ್ಟು ಅತ್ಯಾಧುನಿಕ ವೋಲ್ಲೋಬಸ್‌ಗಳನ್ನು ಹೊಂದಲಿದೆ. ಪ್ರಯಾಣಿಕರಿಗೆ ತೃಪ್ತಿಕರ ಸೇವೆ ಒದಗಿಸುವುದು ನಮ್ಮ ಉದ್ದೇಶ.
- ರಾಮಲಿಂಗಾರೆಡ್ಡಿ,
- ಸಾರಿಗೆ ಮತ್ತು ಮುಜರಾಯಿ ಸಚಿವರು