ಬೇಡಿಕೆ ಈಡೇರಿಕೆ ಸಂಬಂಧ ಚರ್ಚೆ ನಡೆಯುತ್ತಿದ್ದು, ಈಗ ಮುಷ್ಕರ ನಡೆಸುವುದು ತರವಲ್ಲ: ರಾಮಲಿಂಗಾ ರೆಡ್ಡಿ

IMG_0880
Share It


ಬೆಂಗಳೂರು: ‌ಈಗಾಗಲೇ ನೌಕರರ ಸಂಘಟನೆಗಳ ಜತೆ ಚರ್ಚೆ ನಡೆಸಿದ್ದು, ಅವರ ಬೇಡಿಕೆಗಳಿಗೆ ಸಂಬಂಧಿಸಿ ಮಾತುಕತೆ ನಡೆಸಿದ್ದು, ಅವುಗಳಲ್ಲಿ ಕೆಲ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಈಗಾಗಲೇ ಕ್ರಮ ಜರುಗಿದೆ. ಈಗ ಬೆಳಗಾವಿ ಅಧಿವೇಶನದಲ್ಲಿ ಮುಷ್ಕರ ನಡೆಸುವುದು ಸರಿಯಲ್ಲ ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.

ನೌಕರರ ಬೇಡಿಕೆಗಳಾದ ಪರಿಷ್ಕೃತ ವೇತನ ಶ್ರೇಣಿಯಲ್ಲಿ ಸೇವಾ ವಿಮುಕ್ತಿ ಹೊಂದಿದ ನೌಕರರ ಉಪಧನ ಮತ್ತು ಗಳಿಕೆ ರಜೆ ನಗದೀಕರಣ ವ್ಯತ್ಯಾಸದ ಮೊತ್ತ ಪಾವತಿಸಲು ರೂ.224 ಕೋಟಿ ಗಳನ್ನು ನೀಡಲು ಸರ್ಕಾರವು ಡಿ. 7ರಂಂದು ಸರ್ಕಾರಿ ಆದೇಶ ಹೊರಡಿಸಿದೆ. ಅಧಿವೇಶನದ ನಂತರ ಹಣ ಬಿಡುಗಡೆಯಾಗಲಿದೆ‌ ಎಂದು ತಿಳಿಸಿದ್ದಾರೆ.

ಸಿಬ್ಬಂದಿಯ ಅಂತರ ನಿಗಮ ವರ್ಗಾವಣೆ ಪಟ್ಟಿ ಬಿಡುಗಡೆ ಮಾಡಲಾಗಿದೆ. ಭವಿಷ್ಯನಿಧಿ ಮತ್ತು ಡೀಸೆಲ್ ಬಾಕಿ ಹಣ ಪಾವತಿಗಾಗಿ ಸರ್ಕಾರವೇ ಗ್ಯಾರೆಂಟಿ‌ ನೀಡಿ ರೂ.2000 ಕೋಟಿ ಲೋನ್ ನೀಡಿದೆ.

ಸಾರಿಗೆ ಸಂಸ್ಥೆ ಮತ್ತು ಬಸ್ಸುಗಳು ಜನರ ಜೀವನಾಡಿ. ಇತ್ತೀಚಿನ ದಿನಗಳಲ್ಲಿ 5800 ಹೊಸ ಬಸ್ಸುಗಳ ಸೇರ್ಪಡೆ, 10,000 ಹೊಸ ನೇಮಕಾತಿ ಹಾಗೂ ಹತ್ತು ಹಲವು ಕಾರ್ಮಿಕ ಕಲ್ಯಾಣ ಉಪಕ್ರಮಗಳನ್ನು ಸಂಸ್ಥೆಗಳಲ್ಲಿ ಯಶಸ್ವಿಯಾಗಿ ಜಾರಿಗೆ ತರಲಾಗುತ್ತಿದೆ. ಸಾರಿಗೆ ಸಿಬ್ಬಂದಿಯ ಬಗ್ಗೆ ಅಪಾರ ಕಾಳಜಿಯಿದ್ದು, ಅವರ ಹಲವು ವರ್ಷಗಳ ಬೇಡಿಕೆ ನಗದು ರಹಿತ ಆರೋಗ್ಯ ಸೇವೆಗೂ ಶೀಘ್ರದಲ್ಲಿಯೇ ಚಾಲನೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಹಿಂದಿನ ಸರ್ಕಾರದ ಅವಧಿಯಲ್ಲಿ ಭವಿಷ್ಯನಿಧಿ, ಡೀಸೆಲ್ ಬಾಕಿ, ಉಪಧನ, ನಿವೃತ್ತ ನೌಕರರ ಬಾಕಿ ಎಲ್ಲಾ ಸೇರಿ ರೂ‌ 5,900 ಕೋಟಿ ಸಾಲ ಬಾಕಿ ಉಳಿದಿರುವ ಕಾರಣ ಸಾರಿಗೆ ಸಂಸ್ಥೆಗಳನ್ನು ಸಹಜ ಸ್ಥಿತಿಗೆ ತರಲು ಕಾಲಾವಕಾಶದ ಅಗತ್ಯವಿದೆ ಎಂದು ಬಿಜೆಪಿ ಸರಕಾರದ ವಿಫಲ ಆಡಳಿತವನ್ನು ಟೀಕಿಸಿದ್ದಾರೆ.

ಇವೆಲ್ಲವುಗಳ ಬಗ್ಗೆ ಕಾರ್ಮಿಕ ಮುಖಂಡರಿಗೆ, ಸಂಘಟನೆಗಳಿಗೆ ಸಂಪೂರ್ಣ ಮಾಹಿತಿಯಿದೆ. ಸಾರಿಗೆ ಸಂಸ್ಥೆಗಳು ಯಾವ ಸ್ಥಿತಿಯಲ್ಲಿವೆ, ಹಿಂದಿನಿಂದಲೂ ಎಷ್ಟು ನಷ್ಟದಲ್ಲಿವೆ , ಬಾಕಿ ಹಣ ಎಷ್ಟು ಕೊಡಬೇಕಾಗಿದೆ ಎಂಬುದು ತಿಳಿದಿದೆ. ಎಲ್ಲಾ ಪರಿಸ್ಥಿತಿ ಅರಿತಿರುವ ಕಾರ್ಮಿಕ ಸಂಘಟನೆಗಳಾದ ಅಖಂಡ ಕರ್ನಾಟಕ ರಾಜ್ಯ ಸಾರಿಗೆ ಕಾರ್ಮಿಕ ಮಹಾಮಂಡಳಿ (ರಿ), ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ (ರಿ), ಕೆ ಎಸ್ ಆರ್ ಟಿ ಸಿ ನಿಗಮಗಳ ಎಸ್ಸಿ /ಎಸ್ಟಿ ನೌಕರರ ಕ್ಷೇಮಾಭಿವೃದ್ಧಿ ಸಂಘ (ರಿ), ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಎಸ್ಸಿ /ಎಸ್ಟಿ ಅಧಿಕಾರಿಗಳ ಮತ್ತು ನೌಕರರ ಸಮನ್ವಯ ಸಮಿತಿ (ರಿ), ಕೆಬಿಎನ್ಎನ್ ವರ್ಕರ್ಸ್ ಫೆಡರೇಶನ್ (ರಿ), ಕೆ.ಎಸ್.ಆರ್.ಟಿ.ಸಿ/ಬಿ.ಎಂ.ಟಿ.ಸಿ ಯುನೈಟೆಡ್ ಎಂಪ್ಲಾಯೀಸ್ ಯೂನಿಯನ್ , ಕರ್ನಾಟಕ ರಸ್ತೆ ಸಾರಿಗೆ ಮಜ್ದೂರ್ ಸಂಘ ಒಕ್ಕೂಟ, KSRTC Officers Welfare Association (KOWA) ಹಾಗೂ Supervisory staff Associations ಅವರು ಬೆಳಗಾವಿ ಚಲೋಗೆ ಕೈ ಜೋಡಿಸಿಲ್ಲ ಹಾಗೂ ಮುಷ್ಕರಕ್ಕೂ ಆಸಕ್ತಿ ತೋರುತ್ತಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

ಇಂತಹ ಸಂದರ್ಭದಲ್ಲಿ ಬೆಳಗಾವಿ ಚಲೋ ನಡೆಸಿ ಮುಷ್ಕರಕ್ಕೆ ನೋಟಿಸ್ ನೀಡುವುದು ಸೂಕ್ತವಲ್ಲ. ಕಾರ್ಮಿಕ ಸಂಘಟನೆಗಳ ಇತರೆ ಬೇಡಿಕೆಗಳ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಅವರ ಗಮನಕ್ಕೆ ತರಲಾಗಿದ್ದು, ಶೀಘ್ರದಲ್ಲೇ ಮಾತುಕತೆ ಪುನಾರಂಭಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.


Share It

You cannot copy content of this page