ಬೆಂಗಳೂರು: ರಾಜ್ಯದ ಅತ್ಯಂತ ಹಿರಿಯ ಶಾಸಕರಾಗಿದ್ದ ಶ್ಯಾಮನೂರು ಶಿವಶಂಕರಪ್ಪ ಅವರು ಇಂದು ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
6 ಬಾರಿ ಶಾಸಕ ಹಾಗೂ ಒಂದು ಬಾರಿ ಸಂಸದರಾಗಿದ್ದ ಅವರು, ತಮ್ಮ 94 ನೇ ವಯಸ್ಸಿನಲ್ಲಿಯೂ ಶಾಸಕರಾಗುವ ಮೂಲಕ ರಾಜ್ಯದಲ್ಲಿನ ಅತ್ಯಂತ ಹಿರಿಯ ಶಾಸಕ ಎನಿಸಿಕೊಂಡಿದ್ದರು. ಅಖಿಲ ಭಾರತೀಯ ವೀರಶೈವ ಮಹಾಸಭಾದ ಅಧ್ಯಕರೂ ಆಗಿ ಶ್ಯಾಮನೂರು ಕೆಲಸ ಮಾಡಿದ್ದರು.
ಕಳೆದ ಅವಧಿಯ ಕಾಂಗ್ರೆಸ್ ಸರಕಾರದಲ್ಲಿ ಸಚಿವರಾಗಿ ಕೆಲಸ ಮಾಡಿದ್ದ ಅವರು, ಸಿಎಂ ಸ್ಥಾನಕ್ಕೂ ಪರಿಗಣಿಸುವಂತೆ ಅನೇಕ ಸಲ ವಾದ ಮಂಡಿಸಿದ್ದರು. ಪ್ರಸ್ತುತ ಅವರ ಪುತ್ರ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಸಚಿವರಾಗಿದ್ದು, ಸೊಸೆ ದಾವಣಗೆರೆ ಸಂಸದರಾಗಿದ್ದಾರೆ.
ವಯೋಸಹಜ ಖಾಯಿಲೆಯಿಂದ ಅವರು ಬಳಲುತ್ತಿದ್ದು ಕಳೆದ ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು, ಇಂದು ಸಂಜೆ ನಿಧನರಾಗಿದ್ದಾರೆ. ಅವರ ನಿಧನಕ್ಕೆ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದು, ಸಕಲ ಸರಕಾರಿ ಗೌರವದೊಂದಿಗೆ ಅವರ ಅಂತ್ಯಸಂಸ್ಕಾರ ನಡೆಯಲಿದೆ.
