ಬೆಂಗಳೂರು: ಸಿ.ಪಿ.ಯೋಗೇಶ್ವರ್ ವಿರುದ್ಧ ಮಗಳು ನಿಶಾ ಮಾತನಾಡದಂತೆ ಮಲತಾಯಿ (ಯೋಗೇಶ್ವರ್ ಅವರ 2ನೇ ಹೆಂಡತಿ) ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ವಿರುದ್ಧ ಪುತ್ರಿ ನಿಶಾ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಮಾನಹಾನಿಕರ ಅಥವಾ ಅವಹೇಳನಕಾರಿ ಹೇಳಿಕೆಗಳನ್ನು ನೀಡದಂತೆ ಹೈಕೋರ್ಟ್ ನಿರ್ಬಂಧಿಸಿ ಆದೇಶಿದೆ.
ಸಿ.ಪಿ. ಯೋಗೇಶ್ವರ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದ ಮಗಳು ನಿಶಾ ಯೋಗೇಶ್ವರ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹರಿಬಿಟ್ಟಿದ್ದರು. ಉಪ ಚುನಾವಣೆ ಸಂದರ್ಭದಲ್ಲಿ ಈ ವಿಡಿಯೋ ವೈರಲ್ ಆಗಿತ್ತು.
ಚುನಾವಣೆ ಸಂದರ್ಭದಲ್ಲಿ ವಿಡಿಯೋ ಯೋಗೇಶ್ವರ್ ಮೇಲೆ ಎಫೆಕ್ಟ್ ಕೊಡುತ್ತೆ ಎಂದು ಯೋಗೇಶ್ವರ್ 2ನೇ ಹೆಂಡತಿ ಪಿ.ವಿ. ಶೀಲಾ ಹೈಕೋರ್ಟ್ ಮೆಟ್ಟಿಲೇರಿದ್ದು, ಗಂಡ ಯೋಗೇಶ್ವರ್ ವಿರುದ್ಧ ಅವರ ಮೊದಲ ಪತ್ನಿಯ ಮಗಳು ಯಾವುದೇ ಹೇಳಿಕೆ ನೀಡದಂತೆ ತಡೆಯಾಜ್ಞೆ ನೀಡುವಂತೆ ಮನವಿ ಮಾಡಿದ್ದರು.
ವಿಚಾರಣೆ ನಡೆಸಿದ ಹೈಕೋರ್ಟ್ ಯೋಗೇಶ್ವರ್ ವಿರುದ್ಧ ನಿಶಾ ಯಾವುದೇ ಹೇಳಿಕೆ ನೀಡದಂತೆ ಆದೇಶ ಹೊರಡಿಸಿದೆ. ಈ ಸಂಬಂಧ ಬೆಂಗಳೂರಿನ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕೋರ್ಟ್ ಗಮನಕ್ಕೆ ತಂದಿದ್ದಾರೆ.
ಅರ್ಜಿಯ ಮಧ್ಯಂತರ ಮನವಿ ಪರಿಗಣಿಸಿರುವ ಹೈಕೋರ್ಟ್, ಪ್ರತಿವಾದಿಗಳಾದ ಇನ್‌ಸ್ಟಾಗ್ರಾಂ, ಎಕ್ಸ್ ಕಾರ್ಪ್ (ಟ್ವಿಟರ್), ಗೂಗಲ್ ಮತ್ತು ಯೂಟ್ಯೂಬ್‌ನಲ್ಲಿ ನಿಶಾ ಯೋಗೇಶ್ ಅವರ ನಿಂದನಾತ್ಮಕ ಹೇಳಿಕೆಗಳನ್ನು ಅಪ್‌ಲೋಡ್ ಮಾಡಬಾರದು ಮತ್ತು ಈಗಾಗಲೇ ಪ್ರಸಾರ ಮಾಡಲಾಗಿರುವ ತುಣಕುಗಳನ್ನು ತಡೆಹಿಡಿಯಬೇಕು ಎಂದು ಆದೇಶ ನೀಡಿ ವಿಚಾರಣೆ ಮುಂದೂಡಿದೆ.