ಕ್ರೆಡಿಟ್ ಕಾರ್ಡ್ ಬಾಕಿ ಮೇಲೆ ಭಾರಿ ಬಡ್ಡಿ : ಸುಪ್ರೀಂ ಕೋರ್ಟ್ ಹೇಳಿದ್ದೇನು?
ಹೊಸದಿಲ್ಲಿ: ಕ್ರೆಡಿಟ್ ಕಾರ್ಡ್ ಮೇಲೆ ಬ್ಯಾಂಕುಗಳು ವಿಧಿಸುವ ಶೇ.30 ಕ್ಕಿಂತ ಹೆಚ್ಚಿನ ಬಡ್ಡಿ ದರವು ತಪ್ಪಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ರಾಷ್ಟ್ರೀಯ ಗ್ರಾಹಕ ವಿವಾದ ಪರಿಹಾರ ಆಯೋಗದ ತೀರ್ಪಿನ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಬ್ಯಾಂಕುಗಳು ಶೇ. 30 ಕ್ಕಿಂತ ಹೆಚ್ಚಿನ ಬಡ್ಡಿ ದರ ವಿಧಿಸುವ ಪ್ರಕ್ರಿಯೆಯಲ್ಲಿ ಯಾವುದೇ ತಪ್ಪಿಲ್ಲ ಎಂದು ತಿಳಿಸಿದೆ. ಆ ಮೂಲಕ ಎನ್ ಸಿ ಡಿಆರ್ ಸಿ ತೀರ್ಪನ್ನು ಅನೂರ್ಜಿತಗೊಳಿಸಿದೆ.
ಬ್ಯಾಂಕ್ ಗಳು ಕ್ರೆಡಿಟ್ ಕಾರ್ಡ್ ದಾರರ ಬಾಕಿ ಪಾವತಿ ವಿಲಂಬದ ಮೇಲೆ ಶೇ. 36 ರಿಂದ ಶೇ. 49 ರವರೆಗೆ ಬಡ್ಡಿ ವಿಧಿಸುತ್ತಿವೆ ಎಂಬ ದೂರಿನ ಅನ್ವಯ ತನಿಖೆ ನಡೆಸಿ, ಇದು ಗ್ರಾಹಕರ ಮೇಲಿನ ಕ್ರೌರ್ಯ ಎಂದು ಜು.7, 2008 ರಲ್ಲಿ ತೀರ್ಪು ನೀಡಿತ್ತು. ಈ ತೀರ್ಪನ್ನು ಪ್ರಶ್ನಿಸಿ, ಸಿಟಿ ಬ್ಯಾಂಕ್ ಸೇರಿ ಕೆಲ ಖಾಸಗಿ ಬ್ಯಾಂಕುಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಕ್ರೆಡಿಟ್ ಕಾರ್ಡ್ ಪಡೆಯುವವರು ಅಕ್ಷರಸ್ಥರಾಗಿದ್ದು, ಬಡ್ಡಿ ಪ್ರಕ್ರಿಯೆ, ವಿಳಂಬದ ವಿರುದ್ಧದ ಪರಿಣಾಮಗಳ ಬಗ್ಗೆ ಅವರಿಗೆ ಅರಿವಿರುತ್ತದೆ. ಜತೆಗೆ, ಬ್ಯಾಂಕುಗಳು ತೆಗೆದುಕೊಳ್ಳುತ್ತಿರುವ ತೀರ್ಮಾನ ಆರ್ ಬಿಐ ತೀರ್ಮಾನಕ್ಕೆ ವಿರುದ್ಧವಾಗಿದೆ ಎಂಬುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ ಎಂದು ತೀರ್ಪು ನೀಡಿದೆ.
ಕ್ರೆಡಿಟ್ ಕಾರ್ಡ್ ನ ಪಾವತಿ ಷರತ್ತುಗಳ ಬಗ್ಗೆ ಮೊದಲೇ ಬ್ಯಾಂಕುಗಳು ಗ್ರಾಹಕರಿಗೆ ತಿಳಿಸಿರುವ ಪರಿಣಾಮ, ಅದನ್ನು ಅನ್ಯಾಯದ ಕ್ರಮ ಎಂದು ಹೇಳಲು ಸಾಧ್ಯವಿಲ್ಲ. ಆರ್ ಬಿಐ ನಲ್ಲಿ ಈ ಕುರಿತು ಅನ್ಯಾಯಕ್ಕೊಳಗಾದವರು ಎಂದು ಹೇಳಿಕೊಂಡವರು ಯಾವ ಮನವಿಯನ್ನೂ ಮಾಡಿಲ್ಲ. ಹೀಗಾಗಿ, ಅಧಿಕ ಬಡ್ಡಿ ವಿಧಿಸುವುದರ ಮೇಲೆ ಕ್ರಮ ತೆಗೆದುಕೊಳ್ಳುವ ಅಧಿಕಾರ NCDRC ಗೆ ಇಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.