ಬೆಂಗಳೂರು: ಲಿಂಗ ಪರಿವರ್ತನೆ ಮಾಡಿಕೊಂಡವರ ಹೆಸರು ಮತ್ತು ಲಿಂಗ ಬದಲಾವಣೆ ಮಾಡಿ, ಪರಿಷ್ಕೃತ ಜನನ ಪ್ರಮಾಣ ಪತ್ರ ವಿತರಣೆ ಮಾಡುವ ಸಲುವಾಗಿಅಗತ್ಯವಿರುವ ಕಾನೂನು ತಿದ್ದುಪಡಿ ಮಾಡಲು ಸಲಹೆ ನೀಡುವಂತೆ ಹೈಕೋರ್ಟ್ ಕಾನೂನು ಆಯೋಗಕ್ಕೆ ಸೂಚನೆ ನೀಡಿದೆ.
ಪ್ರಕರವೊಂದರಲ್ಲಿ ಲಿಂಗ ಪರಿವರ್ತನೆ ಮಾಡಿಸಿಕೊಂಡ ವ್ಯಕ್ತಿಯೊಬ್ಬರಿಗೆ ಜನನ ಪ್ರಮಾಣ ಪತ್ರದಲ್ಲಿ ಲಿಂಗ ಮತ್ತು ಹೆಸರು ಬದಲಾವಣೆ ಮಾಡಲು ಅವಕಾಶ ನೀಡುವಂತೆ ಮಂಗಳೂರು ಮಹಾನಗರ ಪಾಲಿಕೆಯ ಜನನ ಮತ್ತು ಮರಣ ನೋಂದಣಾಧಿಕಾರಿಗಳಿಗೆ ಹೈಕೋರ್ಟ್ ಆದೇಶ ನೀಡಿದೆ.
ಪುರುಷನಾಗಿ ಹುಟ್ಟಿ ನಂತರದಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಲಿಂಗ ಬದಲಾವಣೆ ಮಾಡಿಸಿಕೊಂಡು ಮಹಿಳೆಯಾದ ವ್ಯಕ್ತಿಯು ತನ್ನ ಜನನ ಪ್ರಮಾಣ ಪತ್ರದಲ್ಲಿ ತನ್ನ ಲಿಂಗ ಹಾಗೂ ಹೆಸರು ಬದಲಾವಣೆ ಮಾಡಿಸಲು ಅವಕಾಶ ನೀಡುವಂತೆ ಕೋರಿದ್ದರು. ಇದಕ್ಕೆ ಮಹಾನಗರ ಪಾಲಿಕೆ ಜನನ ಮತ್ತು ಮರಣ ನೋಂದಣಿ ವಿಭಾಗ ನಿರಾಕರಿಸಿತ್ತು.
ಹೀಗಾಗಿ, ಹೈಕೋರ್ಟ್ ಮೆಟ್ಟಿಲೇರಿದ್ದ ದೂರುದಾರರು, ತಮಗೆ ಜನನ ಪ್ರಮಾಣ ಪತ್ರದಲ್ಲಿ ಲಿಂಗ ಮತ್ತು ಹೆಸರು ಬದಲಾವಣೆಗೆ ಅವಕಾಶ ಕೊಡುವಂತೆ ಮಹಾನಗರ ಪಾಲಿಕೆಗೆ ಸೂಚಿಸುವಂತೆ ಕೋರಿದ್ದರು. ಅರ್ಜಿ ವಿಚಾರಣೆ ನಡೆಸಿದ ಸೂರಜ್ ಗೋವಿಂದ ರಾಜ್ ಅವರಿದ್ದ ಪೀಠ, ಈ ಆದೇಶವನ್ನು ನೀಡಿದೆ.
ಈ ಸಂಬಂಧ ಕಾನೂನು ತಿದ್ದುಪಡಿ ಮಾಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕಾನೂನು ಆಯೋಗಕ್ಕೆ ಸೂಚನೆ ನೀಡಿರುವ ಹೈಕೋರ್ಟ್, ಕಾನೂನು ತಿದ್ದುಪಡಿ ಆಗುವವರೆಗೆ ಲಿಂಗ ಪರಿವರ್ತನೆ ಆದವರಿಗೆ ಪರಿಷ್ಕೃತ ಜನನ ಪ್ರಮಾಣ ಪತ್ರವನ್ನು ನೀಡಬೇಕು ಎಂದು ಆದೇಶ ನೀಡಿದೆ.