ಉಪಯುಕ್ತ ರಾಜಕೀಯ ಸುದ್ದಿ

ಹೊಸ ವರ್ಷ ಆಚರಣೆ; ಬೆಂಗಳೂರು ವ್ಯಾಪ್ತಿಯ ಅಧಿಕಾರಿಗಳಿಗೆ ರಜೆ ಮೇಲೆ ತೆರಳದಂತೆ ಸೂಚನೆ: ಡಿಸಿಎಂ ಡಿ.ಕೆ.ಶಿವಕುಮಾರ್

Share It

ಬೆಂಗಳೂರು: “ನಗರದಲ್ಲಿ ಹೊಸ ವರ್ಷ ಆಚರಣೆ ಹಿನ್ನೆಲೆಯಲ್ಲಿ ಬಿಬಿಎಂಪಿ, ಬೆಸ್ಕಾಂ, ಬಿಡಬ್ಲ್ಯು ಎಸ್ ಎಸ್ ಬಿ ಇಲಾಖೆಯ ಅಧಿಕಾರಿಗಳು ರಜೆ ಮೇಲೆ ತೆರಳದಂತೆ ಹಾಗೂ ಸಿಬ್ಬಂದಿ ವರ್ಗಕ್ಕೆ ರಜೆ ನೀಡದಂತೆ ಸೂಚನೆ ನೀಡಿದ್ದೇನೆ. ಎಲ್ಲರೂ ಸಹ ನಗರದಲ್ಲಿಯೇ ಇರಬೇಕು ಎಂದು ತಿಳಿಸಲಾಗಿದೆ” ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಹೇಳಿದರು.

ನಗರದಲ್ಲಿ ಮಾಧ್ಯಮಳಿಗೆ ಪ್ರತಿಕ್ರಿಯೆ ನೀಡಿದ ಅವರು, “ಮೂರನೇ ತಾರೀಕಿನ ತನಕ ಜನರು ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಇರುತ್ತಾರೆ. ಬಹಳ ಜಾಗ್ರತೆಯಿಂದ ಎಲ್ಲಾ ವ್ಯವಸ್ಥೆ ಮಾಡಬೇಕು. ಜನರಿಗೆ ಸೇವೆಯನ್ನು ನೀಡಬೇಕು ಹಾಗೂ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಬೇಕು. ಅದಕ್ಕಾಗಿ ಬೆಂಗಳೂರು ನಗರದ ಎಲ್ಲಾ ವಲಯದ ಅಧಿಕಾರಿಗಳು ಹಾಜರು ಇರಬೇಕು ಎಂದು ಸೂಚನೆ ನೀಡಿದ್ದೇನೆ” ಎಂದರು.

ಬಿಜೆಪಿಯು ಡಿ.ಕೆ. ಶಿವಕುಮಾರ್ ಅವರನ್ನೇ ಹೆಚ್ಚು ಗುರಿಯಾಗಿಸಿಕೊಂಡಿದೆ ಎನ್ನುವ ಬಗ್ಗೆ ಕೇಳಿದಾಗ, “ಯಾರು ಹೆಚ್ಚು ಶಕ್ತಿ, ಸಾಮರ್ಥ್ಯ ಹೊಂದಿರುತ್ತಾರೋ ಅವರನ್ನು ಗುರಿಯಾಗಿಸುತ್ತಾರೆ” ಎಂದು ಹೇಳಿದರು.

ಗುತ್ತಿಗೆದಾರ ಸಾವಿಗೆ ಕಾರಣವಾಗಿರುವ ಆರೋಪ ಹೊತ್ತಿರುವ ರಾಜು ಡಿ.ಕೆ.ಶಿವಕುಮಾರ್ ಅವರ ತೊಡೆಯ ಮೇಲೆ ಕುಳಿತಿರುವ ಫೋಟೋವನ್ನು ವಿಜಯೇಂದ್ರ ಅವರು ಬಿಡುಗಡೆ ಮಾಡಿರುವ ಬಗ್ಗೆ ಕೇಳಿದಾಗ, “ಯಾರ್ಯಾರು, ಎಂತೆಂತಹ ವ್ಯಕ್ತಿಗಳು ಅವರ ತೊಡೆಯ ಮೇಲೆ ಕುಳಿತಿದ್ದಾರೆ ಎನ್ನುವುದನ್ನು ನಾನು ತೋರಿಸಲೇ” ಎಂದು ತಿರುಗೇಟು ನೀಡಿದರು.


Share It

You cannot copy content of this page