ಬೆಂಗಳೂರು: ಮುಖ್ಯಮಂತ್ರಿಗಳೇ ನೇಮಿಸುವ ಐಎಎಸ್ ಅಧಿಕಾರಿಯಾದ ಕಾರ್ಯದರ್ಶಿ ಹಾಗೂ ಪರೀಕ್ಷಾ ನಿಯಂತ್ರಣಾಧಿಕಾರಿ ಕೆಪಿಎಸ್ಸಿ ಪರೀಕ್ಷೆಗಳನ್ನು ನಿಭಾಯಿಸುತ್ತಾರೆ. ಆದ್ದರಿಂದ ಕೆಪಿಎಸ್ಸಿ ಪರೀಕ್ಷಾ ವೈಫಲ್ಯದ ಜವಾಬ್ದಾರಿಯನ್ನು ಸ್ವತಃ ಮುಖ್ಯಮಂತ್ರಿಗಳೇ ಹೊರಬೇಕಾಗುತ್ತದೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಅರುಣ್ ಶಹಾಪುರ ಅವರು ಇಂದು ಬೆಂಗಳೂರಿನಲ್ಲಿ ತಿಳಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಪಿಎಸ್ಸಿ ವ್ಯವಸ್ಥೆಯನ್ನು ಸರಿ ಮಾಡುವ ದೃಷ್ಟಿಯಿಂದ ತಕ್ಷಣ ಉನ್ನತ ಮಟ್ಟದ ತನಿಖೆ ನಡೆಸಬೇಕು. ಪರೀಕ್ಷಾ ಅಕ್ರಮ ದೊಡ್ಡ ಪ್ರಮಾಣದಲ್ಲಿದೆ. ಅದನ್ನು ತಡೆಯಲು ಸಾಕಷ್ಟು ಕಠಿಣ ಕಾನೂನುಗಳನ್ನು ರೂಪಿಸುವ ಕೆಲಸವನ್ನು ಹಿಂದಿನ ಸರಕಾರ ಮಾಡಿದೆ ಎಂದರು.
ಕರ್ನಾಟಕದಲ್ಲಿ ಈಗ ತನಿಖೆ ಎಂದರೆ ಪ್ರಹಸನ ಎಂಬಂತಾಗಿದೆ. ಮಾತೆತ್ತಿದರೆ ಎಸ್‍ಐಟಿ, ಸಿಐಡಿ ಎನ್ನುತ್ತಿದ್ದಾರೆ. ಸ್ವತಂತ್ರ ನ್ಯಾಯಾಂಗದ ಸುಪರ್ದಿಯಲ್ಲಿ ತನಿಖೆ ನಡೆಯಬೇಕು ಎಂದರು.
ಮೊದಲ ಪರೀಕ್ಷೆಗೆ ಶೇ 62ರಷ್ಟು ಜನರು ಪರೀಕ್ಷೆಗೆ ಹಾಜರಾದರೆ, ಮರು ಪರೀಕ್ಷೆ ವೇಳೆ ಅದು ಶೇ 48ಕ್ಕೆ ಕುಸಿದಿದೆ. ಕರ್ನಾಟಕದ ಕೆಪಿಎಸ್ಸಿ ಉದ್ಯೋಗಾಕಾಂಕ್ಷಿಗಳ ಮತ್ತು ರಾಜ್ಯದ ಜನತೆಯ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ ಎಂದು ಆಕ್ಷೇಪಿಸಿದರು. ಒ.ಎಮ್.ಆರ್ ಶೀಟ್‍ನಲ್ಲಿ ಕೈಬರಹದ ನೋಂದಣಿಗೆ ಅವಕಾಶ ಮಾಡಿಕೊಟ್ಟಿದ್ದು ತಮಗೆ ಬೇಕಾದವರನ್ನು ಕೆ.ಎ.ಎಸ್ ಅಧಿಕಾರಿಗಳನ್ನಾಗಿ ಮಾಡುವ ಹುನ್ನಾರ ಅಡಗಿದೆ ಎಂದು ಅವರು ಆರೋಪಿಸಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಅವರು ಮಾತನಾಡಿ, ಯುಪಿಎಸ್ಸಿ ಪ್ರಾಮಾಣಿಕವಾಗಿ ಪರೀಕ್ಷೆ ನಡೆಸುತ್ತದೆ. ಕೆಪಿಎಸ್ಸಿ ಸೋತು ಹೋಗಿದೆ, ನೀವೇ ಇದರಲ್ಲಿನ ಗೊಂದಲಗಳ ತನಿಖೆ ಮಾಡಿ ಎಂದು ಸರಕಾರವು ಯುಪಿಎಸ್ಸಿಗೆ ಶರಣಾಗಬೇಕಿದೆ ಎಂದು ವಿನಂತಿಸಿದರು.ಪರೀಕ್ಷಾರ್ಥಿಗಳು ಸರಕಾರಿ ನೌಕರಿಯ ನಂಬಿಕೆಯಿಂದ ಪರೀಕ್ಷಾ ಶುಲ್ಕ ಕಟ್ಟಿದ್ದು, ಅದನ್ನು ಬಡ್ಡಿ ಸೇರಿಸಿ ಎಲ್ಲ ಅಭ್ಯರ್ಥಿಗಳಿಗೆ ವಾಪಸ್ ಕೊಡಬೇಕೆಂದು ಅವರು ಒತ್ತಾಯಿಸಿದರು