ಚಿಕ್ಕಮಗಳೂರು: ಶಾಲೆ ಆವರಣದಲ್ಲಿದ್ದ ಇಪ್ಪತ್ತಕ್ಕೂ ಹೆಚ್ಚು ಮರಗಳನ್ನು ಕಿಡಿಗೇಡಿಗಳು ರಾತ್ರೋರಾತ್ರಿ ಕಡಿದು ಸಾಗಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ನಾಗಲಾಪುರ ಗ್ರಾಮದ ಸರಕಾರಿ ಶಾಲೆಯ ಆವರಣದಲ್ಲಿ ಹತ್ತಾರು ಮರಗಳನ್ನು ಬೆಳೆಸಲಾಗಿತ್ತು. ತೇಗದ ಮರ ಸೇರಿ ಅನೇಕ ಬೆಲೆಬಾಳುವ ಮರಗಳು ಬೆಳೆದಿದ್ದವು. ಇದನ್ನು ಮನಗಂಡು ಕಿಡಿಗೇಡಿಗಳು ಮರಗಳನ್ನು ಕಡಿದು ಸಾಗಿಸಿದ್ದಾರೆ ಎನ್ನಲಾಗಿದೆ.
ಶುಕ್ರವಾರ ಮರ ಕಡಿದಿರುವ ಆರೋಪಿಗಳು ರಾತ್ರಿಯೇ ಟ್ರ್ಯಾಕ್ಟರ್ ಮೂಲಕ ಮರದ ದಿಮ್ಮಿಗಳನ್ನು ಸಾಗಿಸಿದ್ದಾರೆ. ಪರಿಸರ ಹಾನಿ ಜತೆಗೆ ಅರಣ್ಯ ನಾಶದ ಕ್ರಮಕ್ಕೆ ಮುಂದಾಗಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಘಟನೆಯ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ದೂರು ದಾಖಲಿಸಿಕೊಂಡು ತನಿಖೆ ನಡೆಸಲು ಮುಂದಾಗಿದ್ದಾರೆ. ಮರ ಕಡಿದ ಕಿಡಿಗೇಡಿಗಳನ್ನು ಪತ್ತೆಹಚ್ಚಿ ಶಿಕ್ಷೆ ಕೊಡಿಸುವ ಭರವಸೆಯನ್ನು ಗ್ರಾಮಸ್ಥರಿಗೆ ನೀಡಿದ್ದಾರೆ.