ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತಲ್ಲಣ ಸೃಷ್ಟಿಸಿದ್ದ ಮೂಡಾ ಹಗರಣದಲ್ಲಿ ಸಿಎಂ ಹಾಗೂ ಅವರ ಪತ್ನಿಯ ಪಾತ್ರವೇನಿಲ್ಲ ಎಂದು ಲೋಕಾಯುಕ್ತ ಕ್ಲಿನ್ ಚಿಟ್ ನೀಡಲು ಮುಂದಾಗಿದೆ.
ಲೋಕಾಯುಕ್ತ ತನಿಖೆಯಲ್ಲಿ ದಾಖಲಾಗಿರಿವ ವರದಿಗಳನ್ನು ಉಲ್ಲೇಖಿಸಿ, ಸಿಎಂ ಸಿದ್ದರಾಮಯ್ಯ ಹಾಗೂ ಅವರ ಪತ್ನಿಗೆ ಕ್ಲಿನ್ ಚಿಟ್ ನೀಡಲು ತಯಾರಿ ನಡೆದಿದೆ ಎಂದು ಹೇಳಲಾಗುತ್ತಿದೆ. ಸೋಮವಾರ ನ್ಯಾಯಾಲಯದ ಮುಂದೆ ಲೋಕಾಯುಕ್ತ ವರದಿ ಸಲ್ಲಿಕೆ ಮಾಡಲಿದ್ದು, ವರದಿಯಲ್ಲಿ ಸಿದ್ದರಾಮಯ್ಯ ಅವರ ಪಾತ್ರ ಏನೂ ಇಲ್ಲ ಎಂಬ ಬಗ್ಗೆ ಉಲ್ಲೇಖಿಸಲಿದೆ.
ಆ ಮೂಲಕ ರಾಜ್ಯ ರಾಜಕಾರಣದಲ್ಲಿ ಸಿಎಂ ಬದಲಾವಣೆಯ ಊಹಾಪೋಹಕ್ಕೆ ಕಾರಣವಾಗುತ್ತಿದ್ದ ಮೂಡಾ ಹಗರಣಕ್ಕೆ ತಾತ್ಕಾಲಿಕ ಬ್ರೇಕ್ ಬೀಳಲಿದೆ. ಒಂದು ವೇಳೆ ದೂರುದಾರರ ಮನವಿಗೆ ಸ್ಪಂದಿಸಿದ ನ್ಯಾಯಾಲಯ ಸಿಬಿಐ ತನಿಖೆಗೆ ನೀಡಿದರಷ್ಟೇ ಪ್ರಕರಣ ಗಂಭೀರವಾಗಲಿದೆ. ಇಲ್ಲವಾದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಪತ್ನಿ ಮೂಡಾ ಹಗರಣದಿಂದ ಬಹುತೇಕ ಕ್ಲೀನ್ ಚಿಟ್ ಪಡೆದುಕೊಳ್ಳಲಿದ್ದಾರೆ.
ಮೈಸೂರಿನ ಅಭಿವೃದ್ಧಿ ಪ್ರಾಧಿಕಾರದಲ್ಲಿ ಬಹುಕೋಟಿ ಹಗರಣ ನಡೆದಿದೆ ಎಂದು ಆರೋಪ ಮಾಡಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರಿಗೆ ದೂರು ದಾಖಲಾಗಿದ್ದು, ರಾಜ್ಯಪಾಲರು ಪ್ಯಾಸಿಕ್ಯೂಷನ್ ಅನುಮತಿ ನೀಡಿದ್ದು, ರಾಜಕೀಯ ತಿಕ್ಕಾಟಕ್ಕೆ ಕಾರಣವಾಗಿತ್ತು. ಅನಂತರ ನ್ಯಾಯಾಲಯದ ಮಧ್ಯಪ್ರವೇಶದಿಂದ ಲೋಕಾಯುಕ್ತ ತನಿಖೆಯ ಮೇಲೆ ಎಲ್ಲರ ಗಮನ ಮೆಟ್ಟಿತ್ತು.
ಪ್ರಕರಣದ ಸಂಬಂಧ ನ್ಯಾಯಾಲಯದ ಅಂತಿಮ ಆದೇಶ ಬಾಕಿಯಿದ್ದರೂ ಲೋಕಾಯುಕ್ತ ವರದಿ, ಪ್ರಕರಣದ ಗಂಭೀರತೆಯನ್ನು ಕಡಿಮೆ ಮಾಡುವ ಸಾಧ್ಯತೆ ಇದೆ. ಲೋಕಾಯುಕ್ತ ವರದಿಯನ್ನೇ ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದರೆ, ಸಿಎಂ ಸಿದ್ದರಾಮಯ್ಯ ಹಾಗೂ ಅವರ ಪತ್ನಿಗೆ ರಿಲೀಫ್ ಸಿಕ್ಕಂತಾಗುತ್ತದೆ.
ಪ್ರಕರಣವನ್ನು ವಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಕೂಡ ಅಷ್ಟೊಂದು ಸೀರಿಯಸ್ ಆಗಿ ತೆಗೆದುಕೊಳ್ಳುತ್ತಿಲ್ಲ. ಪ್ರಕರಣದಲ್ಲಿ ಇಡಿ ಪ್ರವೇಶ ಮಾಡಿದ್ದು, ಕೋಟ್ಯಂತರ ರು. ಅವ್ಯವಹಾರವಾಗಿದೆ ಎಂದು ಹೇಳಿದೆ. ಆದರೆ, ಹಣಕಾಸಿನ ವಹಿವಾಟು ಪ್ರಕರಣದಲ್ಲಿ ನಡೆದೇ ಇಲ್ಲ ಎಂಬ ವಾದವೂ ಇದೆ. ಇಡಿ ತನಿಖೆ ರಾಜಕೀಯ ಪ್ರೇರಿತ ಎಂಬ ಆರೋಪವನ್ನು ಸಿಎಂ ಸೇರಿದಂತೆ ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ.
ಈ ಎಲ್ಲ ಬೆಳವಣಿಗೆಯ ಹಿನ್ನೆಲೆಯಲ್ಲಿ ಲೋಕಾಯುಕ್ತ ಮೂಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಪತ್ನಿಯ ಪಾತ್ರ ಏನೂ ಇಲ್ಲ ಎಂದು ವರದಿ ನೀಡಲು ತೀರ್ಮಾನಿಸಿದೆ. ಇದು ಸಿಎಂಗೆ ಬಹುದೊಡ್ಡ ರಿಲೀಫ್ ಆಗಲಿದೆ.