ಬೆಂಗಳೂರು: ಬಿಎಂಟಿಸಿ ಬಸ್ ಸಂಖ್ಯೆ KA57F3364 ನಲ್ಲಿ ಶಾಲಾ ಹುಡುಗನೊಬ್ಬನಿಗೆ ಕಂಡೆಕ್ಟರ್ ಕಾಲಿನಿಂದ ಒದ್ದಿದ್ದಾರೆ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರವಾಗಿದ್ದು, ಈ ಸಂಬಂಧ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ.
ಬಿಎಂಟಿಸಿ ಬಸ್ಸುಗಳಲ್ಲಿ ಪ್ರತಿನಿತ್ಯ 40 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ಇದರಲ್ಲಿ 1.60 ಲಕ್ಷ ವಿದ್ಯಾರ್ಥಿಗಳಿರುತ್ತಾರೆ. ದಿನಂಪ್ರತಿ 6500 ಬಸ್ಸುಗಳು, 5830 ಅನುಸೂಚಿಗಳಿಂದ 60000 ಟ್ರಿಪ್ ಗಳನ್ನು ಕಾರ್ಯಾಚರಣೆಗೊಳಿಸಲಾಗುತ್ತಿದೆ. ಆದರೆ ಈ ರೀತಿಯ ಘಟನೆ ನಡೆದಿರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಆದರೂ, ಹರಿದಾಡುತ್ತಿರುವ ಈ ವಿಡಿಯೋ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ಸದರಿ ಬಸ್ಸಿನ ನಿರ್ವಾಹಕರು ವಿದ್ಯಾರ್ಥಿಯೊಂದಿಗೆ ದೌರ್ಜನ್ಯನಿಂದ ವರ್ತಿಸಿರುವುದು ದೃಢಪಟ್ಟಲ್ಲಿ ಕೂಡಲೇ ಸೂಕ್ತಶಿಸ್ತಿನ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ರಾಮಲಿಂಗ ರೆಡ್ಡಿ ಅವರು ಸ್ಪಷ್ಟನೆ ನೀಡಿದ್ದಾರೆ.

