ಚನ್ನರಾಯಪಟ್ಟಣ: ಶಿಕ್ಷಣವೇ ಎಲ್ಲ ಸಮಸ್ಯೆಗಳ ಪರಿಹಾರದ ಮೂಲ ರಹದಾರಿ ಎಂದು ಡಾ. ಬಿ.ಆರ್. ಅಂಬೇಡ್ಕರ್ ಅವರು ಹೇಳಿದ್ದಾರೆ. ಅದರಂತೆ, ಎಲ್ಲರೂ ಶಿಕ್ಷಣ ಪಡೆದು ಬದುಕು ಹಸನಾಗಿಸಿಕೊಳ್ಳಬೇಕು ಎಂದು ಶ್ರವಣಬೆಳಗೊಳದ ಶಾಸಕ ಎಚ್.ಸಿ.ಬಾಲಕೃಷ್ಣ ತಿಳಿಸಿದರು.
ಹೀರಿಸಾವೆ ಹೋಬಳಿ ಹೆಗ್ಗಡಿಹಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಕ್ಷಣಕ್ಕಾಗಿ ಸರಕಾರ ಎಲ್ಲವನ್ನೂ ಕೊಡುತ್ತಿದೆ. ಇದನ್ನು ಬಳಸಿಕೊಂಡು ಮಕ್ಕಳು ಉತ್ತಮ ಶಿಕ್ಷಣ ಪಡೆದುಕೊಳ್ಳಬೇಕು. ದೇವೇಗೌಡರು ಆರಂಭಿಸಿದ ವಸತಿ ಶಾಲೆಗಳ ಪರಂಪರೆ ಇಂದು ನಮ್ಮ ತಾಲೂಕಿನಲ್ಲಿ ಮುಂದುವರಿದಿದೆ. ಉತ್ತಮ ಶಿಕ್ಷಣ ಸಿಗುತ್ತಿದೆ ಎಂದು ತಿಳಿಸಿದರು.
ಶಾಲೆಗೆ ಅಗತ್ಯವಾದ ಕಾಂಪೌಡ್ ಮತ್ತು ಬೋರ್ ವೆಲ್ ಕೊರೆಸಿಕೊಡುವ ಭರವಸೆ ಕೊಡುತ್ತೇನೆ. ಫಲಿತಾಂಶಕ್ಕಿಂತ ಗುಣಮಟ್ಟದ ಶಿಕ್ಷಣ ಕೊಡಿಸಬೇಕು ಎಂದು ನಾನು ಶಿಕ್ಷಕರಿಗೆ ಕೇಳಿಕೊಳ್ಳುತ್ತೇನೆ. ಮಕ್ಕಳ ಪ್ರತಿಭೆಯನ್ನು ನಾವು ನೋಡಿ ಸಂತಸಪಡಬೇಕು. ಉತ್ತಮ ಕಾರ್ಯಕ್ರಮ ಮೂಡಿಬರಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಣಾಧಿಕಾರಿ ತಮ್ಮಣ್ಣಗೌಡ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ದೂದ್ ಪೀರ್, ಪ್ರಾಂಶುಪಾಲರಾದ ಹಸೀನ್ ತಾಜ್ , ವಸತಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ರವೀಚಂದ್ರ, ಜಿಲ್ಲಾಧ್ಯಕ್ಷರಾದ ಉಷಾ ಸಿ.ಎನ್., ಕಾರ್ಯದರ್ಶಿ ಶಂಕರ್ ಸೇರಿ ಅನೇಕರು ಭಾಗವಹಿಸಿದ್ದರು.
ವಿವಿಧ ಕ್ರೀಡಾಕೂಟದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ: ತಾಲೂಕು ಹಾಗೂ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ವಿದ್ಯಾರ್ಥಿನಿಯರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.