ಶಿರಸಿ: ಕೆನ್ನೆಯಲ್ಲಿ ಗಾಯಮಾಡಿಕೊಂಡು ಆಸ್ಪತ್ರೆಗೆ ಬಂದ ಬಾಲಕನ ಕೆನ್ನೆಗೆ ಹೊಲಿಗೆ ಹಾಕುವ ಬದಲು ನರ್ಸ್ ಒಬ್ಬರು ಪೆವಿಕ್ವಿಕ್ ಹಾಕಿ ಚಿಕಿತ್ಸೆ ನೀಡಿದ ಘಟನೆ ಹಾನಗಲ್ ತಾಲೂಕಿನಲ್ಲಿ ನಡೆದಿದೆ.
ಹಾನಗಲ್ ತಾಲೂಕಿನ ಅಡೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿರುವ ಜ್ಯೋತಿ ಎಂಬುವವರ ವಿರುದ್ಧ ಪೋಷಕರು ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಈ ನಡುವೆ ಗಾಯ ಗುಣವಾಗುತ್ತಿರುವ ಪೋಷಕರಿಗೂ ಆಶ್ವರ್ಯ ತರಿಸಿದೆ.
ಬಿದ್ದು ಗಾಯಮಾಡಿಕೊಂಡಿದ್ದ ಬಾಲಕನ ಕೆನ್ನೆಯಲ್ಲಿ ಆಳವಾದ ಗಾಯವಾಗಿತ್ತು. ಪೋಷಕರು ಆತನನ್ನು ಅಡೂರು ಗ್ರಾಮದ ಆಸ್ಪತ್ರೆಗೆ ಕರೆದೊಯ್ದಿದ್ದರು. ಈ ವೇಳೆ ನರ್ಸ್ ಜ್ಯೋತಿ, ಹೊಲಿಗೆ ಹಾಕುವ ಬದಲು ಪೆವಿಕ್ವಿಕ್ ಹಾಕಿ ಚಿಕಿತ್ಸೆ ನೀಡಿದ್ದರು ಎನ್ನಲಾಗಿದೆ.
ಹೊಲಿಗೆ ಹಾಕಿದರೆ ಕೆನ್ನೆ ಮೇಲೆ ಕಲೆ ಉಳಿಯುತ್ತದೆ ಎಂಬ ಕಾರಣಕ್ಕೆ ನರ್ಸ್ ಹೀಗೆ ಮಾಡಿದ್ದಾರೆ ಎನ್ನಲಾಗಿದ್ದು, ನನಗೆ ಗೊತ್ತಿರೋದು ಮಾಡಿದ್ದೇನೆ. ನೀವು ಬೇಡ ಎಂದಿದ್ದರೆ ಬೇರೆ ಆಸ್ಪತ್ರೆಗೆ ಬರೆದುಕೊಡುತ್ತಿದ್ದೆ ಎಂದು ಜ್ಯೋತಿ ಪೋಷಕರ ಮುಂದೆ ತಿಳಿಸಿರುವ ವಿಡಿಯೋವನ್ನು ರೆಕಾರ್ಡ್ ಮಾಡಲಾಗಿದೆ.
ಇದೀಗ ಆರೋಗ್ಯ ರಕ್ಷಾ ಸಮಿತಿಗೆ ಈ ಸಂಬಂಧ ಪೋಷಕರು ದೂರು ನೀಡಿದ್ದು, ಸಮಿತಿಯಿಂದ ನೊಟೀಸ್ ನೀಡಲಾಗಿದೆ. ಈ ನಡುವೆ ಬಾಲಕನ ಕೆನ್ನೆಯ ಗಾಯ ಗುಣವಾಗುತ್ತಿರುವುದು ಕಂಡುಬಂದಿದೆ. ಹೀಗಾಗಿ, ಪೋಷಕರು ನರ್ಸ್ ವಿರುದ್ಧ ಮುಂದಿನ ಕಾನೂನು ಕ್ರಮ ತೆಗೆದುಕೊಳ್ಳುತ್ತಾರಾ ಅಥವಾ ಇಷ್ಟಕ್ಕೆ ಬೈಬಿಡುತ್ತಾರಾ ಕಾದು ನೋಡಬೇಕಿದೆ.