ಉಪಯುಕ್ತ ಸುದ್ದಿ

ಟಿಟಿಡಿ ಮಾದರಿಯಲ್ಲಿ ಯಲ್ಲಮ್ಮನಗುಡ್ಡ ಅಭಿವೃದ್ಧಿ: ಸಚಿವ ಎಚ್‌.ಕೆ.ಪಾಟೀಲ ಭರವಸೆ

Share It

ಬೆಳಗಾವಿ: ತಿರುಪತಿ ತಿರುಮಲ ದೇವಸ್ಥಾನಂ(ಟಿಟಿಡಿ) ಮಾದರಿಯಲ್ಲೇ ಸವದತ್ತಿ ಯಲ್ಲಮ್ಮನಗುಡ್ಡದ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಭರವಸೆ ನೀಡಿದರು.

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಭಾರತ ಹುಣ್ಣಿಮೆ ಅಂಗವಾಗಿ ಪ್ರಯುಕ್ತ ಯಲ್ಲಮ್ಮನಗುಡ್ಡದಲ್ಲಿ ಫೆ.12ರಂದು ಬೃಹತ್ ಜಾತ್ರೆ ನಡೆಯಲಿದೆ. 10 ಲಕ್ಷಕ್ಕೂ ಅಧಿಕ ಭಕ್ತರು ಸೇರಲಿದ್ದಾರೆ. ಈ ಬಾರಿ ಜಿಲ್ಲಾಡಳಿತದ ವತಿಯಿಂದ ಭಕ್ತರಿಗೆ ಹೆಚ್ಚಿನ ಮೂಲಸೌಕರ್ಯ ಕಲ್ಪಿಸಲು ವಿವಿಧ ಕಾಮಗಾರಿ ಕೈಗೊಳ್ಳಲಾಗುವುದು. ಜನಸಂದಣಿ ನಿರ್ವಹಿಸುವ ಜತೆಗೆ, ದೇವಿ ದರ್ಶನಕ್ಕಾಗಿ ಯಲ್ಲಮ್ಮ ಕ್ಷೇತ್ರದ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಸಭೆಯಲ್ಲಿ ಹಲವು ವಿಷಯಗಲ ಬಗ್ಗೆ ವಿಸ್ತ್ರತವಾಗಿ ಚರ್ಚಿಸಿದ್ದೇವೆ. ಗುಡ್ಡದಲ್ಲಿ ಭಕ್ತರು ಬಯಲು ಶೌಚಕ್ಕೆ ಹೋಗುವ ಸಮಸ್ಯೆ ಗಂಭೀರವಾಗಿ
ಪರಿಗಣಿಸಿದ್ದೇವೆ. ಭಕ್ತರ ಸಂಖ್ಯೆಗೆ ತಕ್ಕಂತೆ ಶೌಚಗೃಹ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗುವುದು.
ಯಲ್ಲಮ್ಮನಗುಡ್ಡದಲ್ಲಿ ದಾಸೋಹ ಭವನ, ಮೇವು ದಾಸೋಹ ಭವನ ನಿರ್ಮಾಣಕ್ಕೆ ಒಂದು ತಿಂಗಳಲ್ಲೇ ಶಂಕುಸ್ಥಾಪನೆ ನೆರವೇರಿಸಲು ಪ್ರಯತ್ನ ನಡೆದಿದೆ. ಯಲ್ಲಮ್ಮನಗುಡ್ಡದಲ್ಲಿ ವಿವಿಧ ಅಭಿವೃದ್ಧಿ ಕೆಲಸಕ್ಕೆ ಕೇಂದ್ರ ಸರ್ಕಾರದಿಂದ ರೂ. 100 ಕೋಟಿ ಅನುದಾನ ಮಂಜೂರಾಗಿದೆ. ಪ್ರಸಾದ ಯೋಜನೆಯಡಿಯೂ ರೂ. 20 ಕೋಟಿ ಅನುದಾನ ಸಿಕ್ಕಿದೆ. ಇದರೊಂದಿಗೆ ರಾಜ್ಯ ಸರ್ಕಾರವು ವಿವಿಧ ಯೋಜನೆಗಳಡಿ ಸಾಕಷ್ಟು ಅನುದಾನ ಕೊಟ್ಟು, ಗುಡ್ಡದ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ಹೇಳಿದರು.

ಯಲ್ಲಮ್ಮನಗುಡ್ಡವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ದೃಷ್ಟಿಯಿಂದ ವಸತಿ ಗೃಹ, ದಾಸೋಹ ಭವನ ಮತ್ತಿತರ ಮೂಲಸೌಕರ್ಯ ಒಳಗೊಂಡ ಮಾಸ್ಟರ್ ಪ್ಲಾನ್ ಬಹುತೇಕ ಸಿದ್ದಗೊಂಡಿದೆ. ಅದನ್ನು ಮಂಡಳಿಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಿ ಸಾರ್ವಜನಿಕರಿಂದಲೂ ಸಲಹೆ ಸ್ವೀಕರಿಸುತ್ತೇವೆ ಎಂದರು.


Share It

You cannot copy content of this page