64 ವರ್ಷದ ಗಂಡನ ರಕ್ಷಣೆಗಾಗಿ 40 ಅಡಿಯ ಬಾವಿಗೆ ಜಿಗಿದ ಮಹಿಳೆ !
ಬೆಂಗಳೂರು: ಆಕಸ್ಮಿಕವಾಗಿ ಬಾವಿಗೆ ಬಿದ್ದ ತನ್ನ ಪತಿಯ ರಕ್ಷಣೆಗಾಗಿ ಮಹಿಳೆಯೊಬ್ಬರು 40 ಅಡಿ ಆಳದ ಬಾವಿಗೆ ಜಿಗಿದು ಸಾಹಸ ಮೆರೆದ ಘಟನೆ ಕೇರಳದಲ್ಲಿ ನಡೆದಿದೆ.
ಪದ್ಮ ಎಂಬ 54 ವರ್ಷದ ಮಹಿಳೆ, ರಮೇಸನ್ ಎಂಬ 64 ವರ್ಷದ ತನ್ನ ಗಂಡನ ರಕ್ಷಣೆಗೆ ತನ್ನ ಪ್ರಾಣವನ್ನು ಲೆಕ್ಕಿಸದೆ ಬಾವಿಗೆ ಜಿಗಿದಿದ್ದಾರೆ. ಆ ಮೂಲಕ ಆತನ ಪ್ರಾಣ ಕಾಪಾಡುವಲ್ಲಿ ಗೆದ್ದಿದ್ದಾರೆ.
ರಮೇಸನ್, ನಿವೃತ್ತ ಪೊಲೀಸ್ ಆಗಿದ್ದು, ಪತ್ನಿಯ ಜತೆಗೆ ಪಿರವೋಂ ನಲ್ಲಿನ ತಮ್ಮ ಜಮೀನಿನಲ್ಲಿ ಮೆಣಸು ಬೆಳೆದಿದ್ದರು. ಮೆಣಸು ಬಿಡುಸವ ವೇಳೆ ಬಾವಿಯ ಸಮೀಪದಲ್ಲಿದ್ದ ಮರವೊಂದರ ಮೇಲೆ ಹತ್ತಿದ್ದರು. ಅಚಾನಕ್ಕಾಗಿ ಮರ ಮುರಿದು ರಮೇಸನ್ 40 ಅಡಿಯ ಬಾವಿಯೊಳಗೆ ಬಿದ್ದುಬಿಟ್ಟರು.
ಹತ್ತಿರದಲ್ಲಿಯೇ ತನ್ನ ಸಂಬಂಧಿಯೊಬ್ಬರ ಜತೆಗೆ ಮೆಣಸು ಬಿಡಿಸುತ್ತಿದ್ದ ಪದ್ಮಾ, ತಕ್ಷಣವೇ ಓಡಿ ಬಂದು ಗಂಡನ ಸಹಾಯಕ್ಕೆ ಪ್ಲಾಸ್ಟಿಕ್ ಹಗ್ಗವೊಂದನ್ನು ಬಿಟ್ಟರು. ಆದರೆ, ಬಿದ್ದ ರಭಸಕ್ಕೆ ತಲೆಗೆ ಪೆಟ್ಟಾದ ಕಾರಣ ರಮೇಸನ್ ಹಗ್ಗ ಹಿಡಿದು ಮೇಲೆರಲು ಸಾಧ್ಯವಾಗಲಿಲ್ಲ. ಆತ ನಿಧಾನವಾಗಿ ಪ್ರಜ್ಞಾಹೀನರಾಗತ್ತಾ ಹೋದರು. ಹೀಗಾಗಿ, ಮೇಲಿನ ಸಂಪರ್ಕಕ್ಕೆ ಅವರು ಸಿಗದಂತಾಯಿತು.
ಜತೆಯಲ್ಲಿದ್ದ ತನ್ನ ಸಂಬಂಧಿಗೆ ವಿಷಯವನ್ನು ಅಗ್ನಿಶಾಮಕ ಸಿಬ್ಬಂದಿಗೆ ಮುಟ್ಟಿಸುವಂತೆ ಸೂಚಿಸಿದ ಪದ್ಮಾ, ಮರವೊಂದಕ್ಕೆ ಹಗ್ಗ ಕಟ್ಟಿಕೊಂಡು, ಅದರ ಮತ್ತೊಂದು ತುದಿಯನ್ನು ತನ್ನ ಸೊಂಟಕ್ಕೆ ಕಟ್ಟಿಕೊಂಡು ಬಾವಿಯೊಳಗೆ ಜಿಗಿದೆ ಬಿಟ್ಟರು.
ಆಕೆ, ಎರಡು ರಿಂಗ್ ದೂರಕ್ಕೆ ಮಾತ್ರ ಬಂದು ತಲುಪಿದ್ದು, ಅಲ್ಲಿಂದ ಆಕೆಯ ಗಂಡನ ಚಲನಚಲನ ಕಾಣುತ್ತಲೇ ಇರಲಿಲ್ಲ. ಹೀಗಾಗಿ, ಕೊನೆಗೆ ತನ್ನ ಸೊಂಟದ ಹಗ್ಗವನ್ನು ಬಿಚ್ಚಿ 40 ಅಡಿ ಆಳದ ಬಾವಿಗೆ ಜಿಗಿದೇ ಬಿಟ್ಟರು ಎನ್ನಲಾಗಿದೆ.
ಅಲ್ಲಿ ಬಾವಿಯ ಒಂದು ಬದಿಗೆ ಹೊರಗೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಗಂಡನನ್ನು ಕಂಡು, ಆತನನ್ನು ಎಬ್ಬಿಸುವ ಪ್ರಯತ್ನ ಮಾಡಿದ್ದು ಆತ ನಿಧಾನವಾಗಿ ಪ್ರಜ್ಞಾವಸ್ಥೆಗೆ ಮರಳಿದ ಎನ್ನಲಾಗಿದೆ. ಅಷ್ಟರಲ್ಲಿ ಅಗ್ನಿಸಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು, ರಕ್ಷಣಾ ಉಪಕರಣಗಳು ಮತ್ತು ಬಲೆಯನ್ನು ಬಾವಿಯೊಳಗೆ ಇಳಿಸಿದ್ದಾರೆ. ಮೊದಲಿಗೆ ತನ್ನ ಗಂಡನನ್ನು ಬಲೆಯೊಳಗೆ ಕೂರಿಸಿ, ಆತನನ್ನು ಮೇಲಕ್ಕೆ ಕಳುಹಿಸಿದ ಪದ್ಮಾ, ಅನಂತರ ತಾನು ಕೂಡ ಅಗ್ನಿಶಾಮಕ ಸಿಬ್ಬಂದಿ ಕಳುಹಿಸಿದ ಬಲೆಯಲ್ಲಿ ಮೇಲಕ್ಕೆ ಬಂದಿದ್ದಾರೆ.
ಬಾವಿಗೆ ಬಿದ್ದ ರಭಸಕ್ಕೆ ರಮೇಸನ್ ತಲೆ ಮತ್ತು ಕೈಕಾಲಿಗೆ ಪೆಟ್ಟಾಗಿದೆ. ಹಗ್ಗ ಕಟ್ಟಿಕೊಂಡು ಜಿಗಿದ ಕಾರಣಕ್ಕೆ ಪದ್ಮಾ ಕೈ ತರಚಿಕೊಂಡಿದ್ದು ಗಾಯಗಳಾಗಿವೆ. ಹೀಗಾಗಿ, ಈ ದಂಪತಿಗಳನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಪತಿಯ ರಕ್ಷಣೆಗಾಗಿ ಎದೆಗುಂದದೆ ಸಾಹಸ ಮೆರೆದ ಮಹಿಳೆಯ ಬಗ್ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.


