ಕಾಡಾನೆ ಕೆಣಕಿದ ಯುವಕನಿಗೆ ಬಿತ್ತು 25 ಸಾವಿರ ರು. ದಂಡ
ಗುಂಡ್ಲುಪೇಟೆ: ಕಾಡಾನೆಯನ್ನು ಸುಖಾಸುಮ್ಮನೆ ಕೆಣಕಿ ಮಜಾ ತೆಗೆದುಕೊಳ್ಳಲು ಮುಂದಾಗಿದ್ದ ಯುವಕನಿಗೆ ಅರಣ್ಯ ಇಲಾಖೆ ಸಿಬ್ಬಂದಿ 25 ಸಾವಿರ ರುಮ ದಂಡ ವಿಧಿಸಿದ್ದಾರೆ.
ಬಂಡೀಪುರ ಅಭಯಾರಣ್ಯ ವ್ಯಾಪ್ತಿಯಲ್ಲಿ ಯುವಕ ಇಂತಹ ಕಿಡಿಗೇಡಿ ಕೃತ್ಯ ನಡೆಸಿದ್ದು, ಆತನನ್ನು ಗುಂಡ್ಲುಪೇಟೆಯ ಸಾಹುಕ್ ಹಮೀದ್ ಎಂದು ಗುರುತಿಸಲಾಗಿದೆ. ಹಮೀದ್ ಆನೆಯನ್ನು ಕೆಣಕುತ್ತಿರುವ ಎರಡು ವಿಡಿಯೋಗಳ ಆಧಾರದಲ್ಲಿ ದೂರು ದಾಖಲಿಸಿಕೊಂಡಿದ್ದ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದಾರೆ.
ಈ ದಂಡದ ಮೊತ್ತದಿಂದ ಇಂತಹ ಕೃತ್ಯ ನಡೆಸುವವರಿಗೆ ಮುಂದೆ ಎಚ್ಚರಿಕೆ ನೀಡಿದಂತಾಗುತ್ತದೆ. ಈ ಯುವಕನಿಂದಲೂ ಮತ್ತೊಮ್ಮೆ ಇಂತಹ ಕೃತ್ಯ ನಡೆಸುವುದಿಲ್ಲ ಎಂದು ಕ್ಷಮಾಪಣೆ ಬರೆಸಿಕೊಳ್ಳಲಾಗಿದೆ ಎಂದು ಬಂಡೀಪುರ ಹುಲಿ ಅಭಯಾರಣ್ಯ ನಿರ್ದೇಶಕ ಎಸ್. ಪ್ರಭಾಕರನ್ ತಿಳಿಸಿದ್ದಾರೆ.
ದಂಡ ವಿಧಿಸಿದ್ದು ಇದೇ ಮೊದಲ ಪ್ರಕರಣವೇನಲ್ಲ. ವಿಶಾಖಪಟ್ಟಣ ಮೂಲದ ಮತ್ತೊಬ್ಬ ಪ್ರವಾಸಿಗ 2024 ರ ಫೆಬ್ರವರಿಯಲ್ಲಿ ಹೀಗೆಯೇ ಆನೆಯೊಂದಿಗೆ ಕೀಟಲೆ ಮಾಡಲು ಹೋಗಿ, ಆನೆ ಅಟ್ಟಾಡಿಸಿಕೊಂಡು ಬಂದಿತ್ತು. ಆತನಿಗೂ 25 ಸಾವಿರ ದಂಡ ವಿಧಿಸಲಾಗಿತ್ತು ಎನ್ನಲಾಗಿದೆ.
ಇದೇ ಅನೇಕ ಪ್ತವಾಸಿಗರು ಮತ್ತು ಸ್ಥಳೀಯ ಯುವಕರು ಆನೆಗಳ ಜತೆಗೆ ಕಿಡಿಗೇಡಿತನ ಮಾಡಲು ಹೋಗಿ ಅಪಾಯಕ್ಕೆ ಸಿಲುಕಿಕೊಳ್ಳುತ್ತಾರೆ. ಕೆಲವರು ಸೆಲ್ಫಿ ತೆಗೆದುಕೊಳ್ಳುವ ಹುಚ್ಚಿಗೆ ಬಿದ್ದು, ತಮ್ಮ ಜೀವವನ್ನು ಅಪಾಯಕ್ಕೆ ಒಡ್ಡಿಕೊಳ್ಳುತ್ತಾರೆ. ಹೀಗಾಗಿ, ದಂಡ ವಿಧಿಸಲಾಗಿದೆ ಎಂದು ಅಧಿಕಾರಿಗಳು ಸಮರ್ಥನೆ ಮಾಡಿಕೊಂಡಿದ್ದಾರೆ.


