ಸುದ್ದಿ

ಕಾಟ ಕೊಡುವ ಅತ್ತೆಯನ್ನು ಸಾಯಿಸಲು ಡಾಕ್ಟರ್ ಬಳಿ ಸಲಹೆ ಕೇಳಿದ ಖತರ್ನಾಕ್ ಸೊಸೆ !

Share It

ಬೆಂಗಳೂರು: ಅತ್ತೆ ಸೊಸೆಯ ಕಿತ್ತಾಟ ನಮ್ಮ ಸಮಾಜಕ್ಕೆ ಹೊಸದೇನೂ ಅಲ್ಲ. ಆದರೆ, ಹೀಗೆ ಕಾಟ ಕೊಡುವ ಅತ್ತೆಯ ಕತೆಯನ್ನು ಮುಗಿಸಲು ಮಹಿಳೆಯೊಬ್ಬರು ಡಾಕ್ಟರ್ ಸಲಹೆ ಕೇಳಿದ ಘಟನೆ ರಾಜಧಾನಿಯಲ್ಲಿ ನಡೆದಿದೆ.

ಸೊಸೆಯ ಈ ಖತರ್ನಾಕ್ ಐಡಿಯಾ ಕೇಳಿ ಸ್ವತಃ ಡಾಕ್ಟರ್ ಬೆಚ್ಚಿಬಿದ್ದಿದ್ದಾರೆ. ತಾವೇ ಓಡೋಡಿ ಬಂದು ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ. ಇದೀಗ ಪೊಲೀಸರು ಸೊಸೆಯ ಬೆನ್ನುಬಿದ್ದಿದ್ದು, ಆಕೆ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾಳೆ ಎನ್ನಲಾಗಿದೆ.

ಈ ಕುರಿತು ಸಂಜಯ ನಗರ ಪೊಲೀಸ್ ಠಾಣೆಯಲ್ಲಿ ಡಾ. ಸುನೀಲ್ ಎಂಬುವವರು ದೂರು ನೀಡಿದ್ದು, ಆ ಸೊಸೆಯ ವಿರುದ್ಧ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆಕೆಯ ಫೋನ್ ನಂಬರ್ ಪಡೆದು ಆಕೆಯನ್ನು ಪತ್ತೆ ಹಚ್ಚುವ ಕೆಲಸಕ್ಕೆ ಮುಂದಾಗಿದ್ದಾರೆ.

ಸಂಜಯ ನಗರದಲ್ಲಿ ಕ್ಲಿನಿಕ್ ನಡೆಸುತ್ತಿರುವ ವೈದ್ಯರಾದ ಡಾಮ ಸುನೀಲ್ ಅವರ ಬಳಿ, ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೊಬ್ಬರು ಇಂತಹ ಸಲಹೆ ಕೇಳಿದ್ದಾರೆ. ತಮ್ಮ ಅತ್ತೆಯನ್ನು ಸಾಯಿಸಲು ಯಾವುದಾದರೂ ಮಾತ್ರೆ ಕೊಡುವಂತೆ ಕೇಳಿದ್ದಾರೆ. ಅನಂತರ, ವೈದ್ಯರು ಇದೆಲ್ಲ ತಪ್ಪಲ್ಲವಾ ಎನ್ನುತ್ತಿದ್ದಂತೆ ಮೆಸೇಜ್ ಡಿಲೀಟ್ ಮಾಡಿ, ಮೊಬೈಲ್ ಸ್ವಿಚ್ ಆಪ್ ಮಾಡಿಕೊಂಡಿದ್ದಾರೆ.

ಡಾ. ಸುನೀಲ್ ಗೆ ಮಹಿಳೆ ಕಡೆಯಿಂದ ಮೊದಲಿಗೆ ಹಾಯ್ ಎಂದು ಮೆಸೇಜ್ ಬಂದಿದೆ. ಡಾಕ್ಟರ್ ಪ್ರಶ್ನೆ ಮಾಡಿದಾಗ ‘ನಿಮ್ಮ ಬಳಿ ಒಂದು ವಿಷಯ ಕೇಳಬೇಕು ಸರ್’ ಎಂದಿದ್ದಾರೆ. ಕೇಳಿ ಎಂದಾಗ ‘ನೀವು ಬಯ್ತೀರಾ ಅನ್ಸುತ್ತೆ’ ಎಂದಿದ್ದಾರೆ. ಅದೇನ್ ಹೇಳಿ ಎಂದು ವೈದ್ಯರು ಕೇಳಿದಾಗ ‘ನಮ್ಮ ಅತ್ತೆ ನನಗೆ ತುಂಬಾ, ತೊಂದರೆ ಕೊಡ್ತಾರೆ. ಅದಕ್ಕಾಗಿ, ಅವರನ್ನು ಸಾಯಿಸಲು ಮಾತ್ರೆ ಇದ್ರೆ ಕೊಡಿ, ಒಂದೆರಡು ಮಾತ್ರೆ ನುಂಗಿದ್ರೆ ಸಾಯ್ತಾರಲ್ಲ ಅಂತಹ ಮಾತ್ರೆ ಬೇಕು ಎಂದು ಕೇಳಿದ್ದಾರೆ.

ಮಹಿಳೆ ಮಾತಿಗೆ ಬಚ್ಚಿಬಿದ್ದ ಡಾಕ್ಟರ್ ಇದೆಲ್ಲ ತಪ್ಪಲ್ಲವಾ ಎನ್ನುತ್ತಿದ್ದಂತೆ ಮಹಿಳೆ ಮೆಸೇಜ್ ಡಿಲೀಟ್ ಮಾಡಿ, ಮೊಬೈಲ್ ಸ್ವಿಚ್ ಆಪ್ ಮಾಡಿದ್ದಾರೆ. ಇದರಿಂದ ಗಾಬರಿಯಾದ ಡಾಕ್ಟರ್ ಸುನೀಲ್ ಪೊಲೀಸ್ ಠಾಣೆಗೆ ದೂರು ನೀಡಿ, ಮಹಿಳೆ ಮಾಡಿರುವ ಮೆಸೇಜ್ ಗಳ ಸ್ಕ್ರೀನ್ ಶಾಟ್ ಲಗತ್ತಿಸಿದ್ದಾರೆ. ಇದೀಗ ಸ್ಕ್ರೀನ್ ಶಾಟ್ ಫುಲ್ ವೈರಲ್ ಆಗುತ್ತಿದೆ.

ಮಹಿಳೆಯ ಪೂರ್ವಾಪರ ಪತ್ತೆಹಚ್ಚಲು ಸಂಜಯ ನಗರ ಪೊಲೀಸರು ಮುಂದಾಗಿದ್ದು, ಒಂದು ವೇಳೆ ಬೇರೆ ಮಾರ್ಗದಲ್ಲಿ ಅತ್ತೆಯನ್ನು ಸಾಯಿಸುವ ಪ್ರಯತ್ನ ನಡೆಸಿದರೆ ಹೇಗೆ? ಅಥವಾ ಇದನ್ನು ಯಾರಾದರೂ ಕಿಡಿಗೇಡಿಗಳು ಮಾಡಿದ್ರಾ? ಎಂಬ ವಿಷಯದ ಕುರಿತು ತನಿಖೆ ಆರಂಭಿಸಿದ್ದಾರೆ. ಮಹಿಳೆಯ ಮೊಬೈಲ್ ನಂಬರ್ ಹಿಡಿದು ವಿಚಾರಣೆ ಮುಂದುವರಿಸಿದ್ದಾರೆ.


Share It

You cannot copy content of this page